ರಾಯಚೂರು ತಾಲೂಕಿನ ಯರಮರಸ್ ಬಳಿ ಇರುವ ವೈಟಿಪಿಎಸ್ (ಯರಮರಸ್ ಥರ್ಮಲ್ ಪವರ್ ಸ್ಟೇಷನ್)ನಲ್ಲಿ ವಿದ್ಯುತ್ ಅವಘಡ ಸಂಭವಿಸಿದ್ದು, ಎಲೆಕ್ಟ್ರಿಷಿಯನ್ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ. ವೈಟಿಪಿಎಸ್‌ನ ಪ್ಲಾಂಟ್‌ನ ಸ್ವಿಚರ್ ರೂಮ್‌ನಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ಪ್ಲ್ಯಾಷ್ ಓವರ್ ಸಂಭವಿಸಿದೆ ಎನ್ನಲಾಗಿದೆ.
ಅವಘಡದಿಂದ ಸಿಬ್ಬಂದಿಯ ಕೈ ಹಾಗೂ ಮುಖಕ್ಕೆ ಸುಟ್ಟ ಗಾಯಗಳಾಗಿವೆ. ಗಾಯಗೊಂಡವರನ್ನು ಶ್ರೀ ರಾಮ್ ರೆಡ್ಡಿ (38) ಎಂದು ಗುರುತಿಸಲಾಗಿದೆ. ಘಟನೆಯ ವೇಳೆ ಪ್ಲ್ಯಾಷ್ ಓವರ್ ಸಂಭವಿಸಿದರೂ, ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ ಎಂದು ತಿಳಿದುಬಂದಿದೆ.
ವಿದ್ಯುತ್ ಉಪಕರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು, ಸ್ಥಳದಲ್ಲಿದ್ದ ಇತರ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದೆ. ಗಾಯಗೊಂಡ ಶ್ರೀ ರಾಮ್ ರೆಡ್ಡಿ ಅವರನ್ನು ತಕ್ಷಣವೇ ರಾಯಚೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಕುರಿತು ವೈಟಿಪಿಎಸ್ ಅಧಿಕಾರಿಗಳು ಹಾಗೂ ಸಂಬಂಧಿಸಿದ ಸಿಬ್ಬಂದಿಯಿಂದ ಮಾಹಿತಿ ಕಲೆಹಾಕಲಾಗುತ್ತಿದ್ದು, ಅವಘಡಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಪರಿಶೀಲನೆ ನಡೆಯುತ್ತಿದೆ.