https://youtu.be/VnXVftmaQwI?si=AS2kL6OI4DDqKYUT
ರಾಯಚೂರು/ಕೊಸಗಿ : ಪಕ್ಕದ ಆಂಧ್ರಪ್ರದೇಶ ರಾಜ್ಯದ ಕೊಸಗಿ ಮಂಡಲ ವ್ಯಾಪ್ತಿಯ ರಾಜಲಾಬಂಡ್ ಗ್ರಾಮದಲ್ಲಿರುವ ಆಣೆಕಟ್ಟಿನಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುಃಖದ ಘಟನೆ ನಡೆದಿದೆ. ಈ ದುರ್ಘಟನೆ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ಶೋಕ ಮಡುಗಟ್ಟಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಿಂದ ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕುಟುಂಬಸ್ಥರು ಆಂಧ್ರಪ್ರದೇಶದ ಕೊಸಗಿ ಪಟ್ಟಣಕ್ಕೆ ತೆರಳಿದ್ದರು. ಮದುವೆ ಕಾರ್ಯಕ್ರಮಕ್ಕೆ ತೆರಳುವ ಮಾರ್ಗ ಮಧ್ಯೆ ತುಂಗಭದ್ರಾ ನದಿಗೆ ಕುಡಿಯುವ ನೀರಿಗಾಗಿ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ರಾಜಲಾಬಂಡ್ ಆಣೆಕಟ್ಟಿನಲ್ಲಿ ನೀರು ಹರಿಯುತ್ತಿತ್ತು. ಈ ಸಂದರ್ಭದಲ್ಲಿ ಸರದಿಗಾಗಿ ನಾಲ್ವರು ಆಣೆಕಟ್ಟಿನ ಬಳಿ ನೀರಿಗೆ ಇಳಿದು ಈಜಾಡಲು ಮುಂದಾದರು.

ಆದರೆ ಆಣೆಕಟ್ಟಿನ ಆಳ ಪ್ರದೇಶದಲ್ಲಿ ನೀರಿನ ಹೊಳೆಯ ತೀವ್ರತೆ ಹಾಗೂ ಆಳದ ಬಗ್ಗೆ ಅರಿವಿಲ್ಲದೇ ನೀರಿಗೆ ಇಳಿದ ಪರಿಣಾಮ ನಾಲ್ವರು ಏಕಾಏಕಿ ನೀರಿನಲ್ಲಿ ಮುಳುಗಿದರು. ಜೊತೆಯಲ್ಲಿದ್ದವರು ಸಹಾಯ ಮಾಡಲು ಪ್ರಯತ್ನಿಸಿದರೂ, ನೀರಿನ ವೇಗ ಮತ್ತು ಆಳದ ಕಾರಣದಿಂದ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಗಂಡ-ಹೆಂಡತಿ ಮತ್ತು ಇಬ್ಬರು ಸಹೋದರರು ಸೇರಿ ನಾಲ್ವರು ದುರಂತವಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಮೃತರನ್ನು ಉಮಾವತಿ (35) ಪತಿ ಗೋವಿಂದ, ಮೂಲತಃ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮ; ರತ್ನ (28) ಪತಿ ಮಹಾಂತೇಶ್, ಸುಂಕೇಶ್ವರ ಗ್ರಾಮ; ಶಿವಾನಂದ (24) ತಂದೆ ಹನುಮಂತರಾಯ, ಕುರ್ಡಿ ಗ್ರಾಮ; ಹಾಗೂ ಮಹಾಂತೇಶ್ (24) ತಂದೆ ಪೀತಾಂಬರ, ಕುರ್ಡಿ ಗ್ರಾಮ ಎಂದು ಗುರುತಿಸಲಾಗಿದೆ. ಮೃತರು ದಾಸರು ಸಮುದಾಯಕ್ಕೆ ಸೇರಿದವರಾಗಿದ್ದು, ಮಾನ್ವಿ ತಾಲೂಕಿನ ನಿವಾಸಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಸ್ಥಳೀಯರ ಸಹಾಯದಿಂದ ಶೋಧ ಕಾರ್ಯಾಚರಣೆ ನಡೆಸಿ ನಾಲ್ವರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ನಡೆದ ರಾಜಲಾಬಂಡ್ ಆಣೆಕಟ್ಟು ಕಂದಕೂರ್ ಗ್ರಾಮ ವ್ಯಾಪ್ತಿಯಲ್ಲಿ ಇದ್ದು, ಅದು ಆಂಧ್ರಪ್ರದೇಶ ರಾಜ್ಯದ ಕೊಸಗಿ ಮಂಡಲ ಹಾಗೂ ಕೊಸಗಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಡುತ್ತದೆ. ಈ ಹಿನ್ನೆಲೆಯಲ್ಲಿ ಕೊಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಮದುವೆ ಸಮಾರಂಭಕ್ಕಾಗಿ ಸಂತೋಷದಿಂದ ಸೇರಿದ್ದ ಕುಟುಂಬಕ್ಕೆ ಈ ದುರ್ಘಟನೆ ಆಘಾತ ತಂದಿದ್ದು, ಮೃತರ ಬಂಧುಗಳು ಹಾಗೂ ಗ್ರಾಮಸ್ಥರಲ್ಲಿ ಆಕ್ರಂದನ ಮಡುಗಟ್ಟಿದೆ. ಈ ಘಟನೆ ಪ್ರದೇಶದಲ್ಲಿ ತೀವ್ರ ವಿಷಾದಕ್ಕೆ ಕಾರಣವಾಗಿದೆ.