ಮಾನ್ವಿ ಪಟ್ಟಣದ ನಿವಾಸಿ ಮಹಾಂತೇಶ್ ಎಂಬ ಯುವಕನ ಬದುಕಿನಲ್ಲಿ ವಿಧಿ ಒಂದರ ಹಿಂದೆ ಮತ್ತೊಂದು ಆಘಾತ ನೀಡಿದೆ. ಕೈ ಮುರಿದು ಗಂಭೀರವಾಗಿ ಗಾಯಗೊಂಡಿದ್ದರೂ, ಆರ್ಥಿಕ ಸಂಕಷ್ಟದ ನಡುವೆಯೂ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಗೆ ಚಿಕಿತ್ಸೆ ಕೊಡಿಸುವುದನ್ನೇ ಮೊದಲ ಆದ್ಯತೆಯಾಗಿ ಕಂಡ ಮಹಾಂತೇಶ್, ತನ್ನ ಚಿಕಿತ್ಸೆಯನ್ನು ಮುಂದೂಡಿದ್ದ. ಆದರೆ ದುರದೃಷ್ಟವಶಾತ್ ಚಿಕಿತ್ಸೆ ಫಲಿಸದೆ ತಾಯಿ ಮೃತಪಟ್ಟಿದ್ದಾರೆ.
ತಾಯಿಯನ್ನು ಉಳಿಸಿಕೊಳ್ಳಲು ತನ್ನ ಆರೋಗ್ಯವನ್ನೇ ಕಡೆಗಣಿಸಿದ್ದ ಮಹಾಂತೇಶ್, ಇದೀಗ ಅದರ ಬೆಲೆ ಕಟ್ಟುವಂತಾಗಿದೆ. ಹಣದ ಕೊರತೆಯಿಂದ ಸಮಯಕ್ಕೆ ಸರಿಯಾಗಿ ಕೈಗೆ ಚಿಕಿತ್ಸೆ ಪಡೆಯದ ಪರಿಣಾಮ, ಕೈಯ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸಿದ್ದು, ಈಗ ಕೈ ಕತ್ತರಿಸುವ ಪರಿಸ್ಥಿತಿಯ ಅಂಚಿಗೆ ತಲುಪಿದೆ.
ಸದ್ಯ ಬೆಳಗಾವಿಯ ಆಸ್ಪತ್ರೆಯಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಕೈಗೆ ರಾಡ್ ಅಳವಡಿಸುವ ಮೂಲಕ ಕೈ ಉಳಿಸುವ ಭರವಸೆ ನೀಡಿದ್ದಾರೆ. ಆದರೆ ಇದಕ್ಕೆ ಸುಮಾರು 5 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಕುಟುಂಬ ನಿರ್ವಹಣೆಯೇ ಕಷ್ಟವಾಗಿರುವ ಮಹಾಂತೇಶ್, ಚಿಕಿತ್ಸೆಯ ವೆಚ್ಚ ಭರಿಸಲಾಗದೆ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ತಾಯಿಗಾಗಿ ತನ್ನ ನೋವನ್ನು ಮರೆತ ಈ ಯುವಕನ ಕೈ ಉಳಿಸಲು ಮಾನವೀಯ ಹೃದಯಗಳು ನೆರವಿನ ಹಸ್ತ ಚಾಚಬೇಕಿದೆ.