ರಾಯಚೂರು : ತಾಲ್ಲೂಕಿನ ಗಿಲ್ಲೆಸುಗೂರು ಕ್ಯಾಂಪ್‌ನಲ್ಲಿ ದೇವಸ್ಥಾನ ಹಾಗೂ ಚರ್ಚ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಪುನರ್ವಸತಿ ಸ್ಥಳದಲ್ಲಿ ನಿರ್ಮಿಸಲಾಗಿರುವ ಚರ್ಚ್ ಮತ್ತು ಆಂಜನೇಯ ದೇವಸ್ಥಾನದ ವಿಚಾರವಾಗಿ ಕಳೆದ ಎರಡು ತಿಂಗಳಿಂದ ವಿವಾದ ಮುಂದುವರಿದಿತ್ತು. ಈ ಹಿಂದೆ ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಯ ಸಮ್ಮುಖದಲ್ಲಿ ಸಂಧಾನ ನಡೆಸಲಾಗಿತ್ತು. ಆದರೂ ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮತ್ತೆ ಅಸಮಾಧಾನ ಸ್ಫೋಟಗೊಂಡಿದೆ.
ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಪರಸ್ಪರ ಕಲ್ಲು ತೂರಾಟ ಮಾಡಿಕಿಂಡಿದ್ದಾರೆ ಎನ್ನಲಾಗುತ್ತಿದೆ, ಕಲ್ಲು ತೂರಾಟದಲ್ಲಿ ಇಬ್ಬರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ರಾಯಚೂರಿನ ಒಪೆಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಇಡಪನೂರು ಪೊಲೀಸರು ಹಾಗೂ ಎಎಸ್ಪಿ ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಚ್ಚಾಲಿ ಗ್ರಾಮ ಹಾಗೂ ಬಿಚ್ಚಾಲಿ ಕ್ಯಾಂಪ್ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಏಳು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.