LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹೆಸರಿಗೆ ಮಾತ್ರ ಕಲ್ಯಾಣ ಕರ್ನಾಟಕ, ನೌಕರರ ಪದೋನ್ನತಿಗೆ ಅನ್ಯಾಯದ ಗ್ರಹಣ..?

371(ಜೆ) ಆಶಯಕ್ಕೆ ಧಕ್ಕೆ..?

 

ಹೈದರಾಬಾದ್ ಕರ್ನಾಟಕ ಭಾಗಕ್ಕೆ ನೀಡಿರುವ ಸಂವಿಧಾನದ 371(ಜೆ) ವಿಶೇಷ ಸ್ಥಾನಮಾನ ಈ ಭಾಗದ ಜನರಿಗೆ ಉದ್ಯೋಗ, ಶಿಕ್ಷಣ ಹಾಗೂ ಅಭಿವೃದ್ಧಿಯಲ್ಲಿ ನ್ಯಾಯಯುತ ಅವಕಾಶ ಕಲ್ಪಿಸುವ ಉದ್ದೇಶ ಹೊಂದಿದೆ. ಆದರೆ ಅದರ ಆಶಯವೇ ನೌಕರರ ಪದೋನ್ನತಿ ಸೇರಿದಂತೆ ವಿವಿಧ ಸೇವಾ ಅವಕಾಶಗಳಲ್ಲಿ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂಬ ಅಸಮಾಧಾನ ಇದೀಗ ಕೇಳಿಬಂದಿದೆ.

ಕಲ್ಯಾಣ ಕರ್ನಾಟಕ ಮೂಲದ ನೌಕರರು 20 ವರ್ಷಕ್ಕೂ ಅಧಿಕ ಸೇವೆ ಸಲ್ಲಿಸಿದ್ದರೂ ಪದೋನ್ನತಿಗಾಗಿ ಕಾಯುವ ಪರಿಸ್ಥಿತಿ ಇದೆ ಎನ್ನಲಾಗಿದೆ. ಮತ್ತೊಂದೆಡೆ, ರಾಜ್ಯದ ವಿವಿಧ ಜಿಲ್ಲೆಗಳ ಮೂಲ ಹೊಂದಿರುವ ಕೆಲ ನೌಕರರು ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪದೋನ್ನತಿ ಪಡೆಯುತ್ತಿದ್ದಾರೆ ಎಂಬ ಆರೋಪ ನೌಕರರಿಂದ ಕೇಳಿಬಂದಿದೆ.

ಹಲವು ಇಲಾಖೆಗಳ ವಿವಿಧ ಹುದ್ದೆಗಳ ಪದೋನ್ನತಿ ಪ್ರಕ್ರಿಯೆಯಲ್ಲೂ ಇದೇ ರೀತಿಯ ಗೊಂದಲ ಮತ್ತು ತಾರತಮ್ಯ ಉಂಟಾಗುತ್ತಿದೆ ಎಂಬ ಆರೋಪವಿದ್ದು, ಸ್ಥಳೀಯ ವೃಂದದ ನೌಕರರಿಗೆ ತಮ್ಮದೇ ಭಾಗದಲ್ಲಿ ಪದೋನ್ನತಿಯ ಅವಕಾಶ ಸಿಗದಿರುವುದು ನೋವಿನ ಸಂಗತಿಯಾಗಿದೆ ಎಂದು ನೌಕರರು ಅಳಲು ತೋಡಿಕೊಂಡಿದ್ದಾರೆ.

371(ಜೆ) ವರವೋ, ನೌಕರರಿಗೆ ಶಾಪವೋ?
371(ಜೆ)ಯ ಆಶಯವೇ ಈ ಭಾಗದ ಹಿಂದುಳಿದ ವರ್ಗದ ಜನರಿಗೆ ವಿಶೇಷ ಅವಕಾಶ ಕಲ್ಪಿಸುವುದಾದರೆ, ಅದರ ಪ್ರಯೋಜನ ನೇಮಕಾತಿಯಲ್ಲಷ್ಟೇ ಅಲ್ಲದೆ, ಸೇವಾ ಹಿರಿತನ ಮತ್ತು ನಿಯಮಾನುಸಾರ ಪದೋನ್ನತಿಯಲ್ಲೂ ನ್ಯಾಯಯುತವಾಗಿ ಪ್ರತಿಫಲಿಸಬೇಕು ಎಂಬುದು ನೌಕರರ ಆಗ್ರಹ.

ಹೈದರಾಬಾದ್ ಕರ್ನಾಟಕ ವೃಂದಕ್ಕೆ ಸಂಬಂಧಿಸಿದ ಅರ್ಜಿ ಸಲ್ಲಿಕೆ, ನೇಮಕಾತಿ ದಾಖಲೆ, ವೃಂದ ಹಂಚಿಕೆ, ರೋಸ್ಟರ್ ಹಾಗೂ ಪದೋನ್ನತಿ ನಿಯಮಗಳ ಕುರಿತು ಸ್ಪಷ್ಟತೆ ಇಲ್ಲದಿರುವುದರಿಂದ ಅನೇಕ ನೌಕರರು ಗೊಂದಲಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.

ಹಕ್ಕು ಕೇಳಲೂ ಭಯ... ಮೌನವಾಗಿರಲೂ ನೋವು..!

ತಮ್ಮ ಸೇವಾ ಹಕ್ಕು ಮತ್ತು ಪದೋನ್ನತಿ ಕುರಿತು ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದರೆ ಸೇವಾ ಭವಿಷ್ಯಕ್ಕೆ ತೊಂದರೆಯಾಗಬಹುದು ಎಂಬ ಆತಂಕದಿಂದ ಕೆಲ ನೌಕರರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

“ವರ್ಷಗಳ ಸೇವೆ ನಮ್ಮದು; ಪದೋನ್ನತಿಯ ಅವಕಾಶ ಮಾತ್ರ ಬೇರೆಯವರಿಗೆ ಏಕೆ?” ಎಂಬ ಪ್ರಶ್ನೆ ನೌಕರರ ಮನಸ್ಸನ್ನು ಕಾಡುತ್ತಿದೆ. ಪದೋನ್ನತಿ ಕೇವಲ ಹುದ್ದೆಯ ಬದಲಾವಣೆಯಲ್ಲ. ಅದು ವರ್ಷಗಳ ಸೇವೆಗೆ ಸಿಗುವ ಗೌರವ, ಕುಟುಂಬದ ಭವಿಷ್ಯಕ್ಕೆ ಸಿಗುವ ಭದ್ರತೆ. ಹೀಗಾಗಿ ನೌಕರರ ನೋವನ್ನು ಸರ್ಕಾರ ನಿರ್ಲಕ್ಷಿಸಬಾರದು.

ಸರ್ಕಾರ ಗಂಭೀರವಾಗಿ ಪರಿಶೀಲಿಸಲಿ
371(ಜೆ)ಯ ಆಶಯಕ್ಕೆ ಅನುಗುಣವಾಗಿ ಕಲ್ಯಾಣ ಕರ್ನಾಟಕದ ನೌಕರರಿಗೆ ಪದೋನ್ನತಿ ಸೇರಿದಂತೆ ವಿವಿಧ ಸೇವಾ ಅವಕಾಶಗಳಲ್ಲಿ ನ್ಯಾಯ ದೊರೆಯುತ್ತಿದೆಯೇ ಎಂಬುದರ ಕುರಿತು ಸರ್ಕಾರ ಸಮಗ್ರ ಪರಿಶೀಲನೆ ನಡೆಸಬೇಕು.

ಸ್ಥಳೀಯ ಹಾಗೂ ಉಳಿಕೆ ಮೂಲ ವೃಂದದ ಹುದ್ದೆಗಳು, ರೋಸ್ಟರ್, ಸೇವಾ ಹಿರಿತನ ಮತ್ತು ಪದೋನ್ನತಿ ನಿಯಮಗಳನ್ನು ಪರಿಶೀಲಿಸಿ, ಯಾವುದೇ ತಾರತಮ್ಯ ಕಂಡುಬಂದರೆ ತಕ್ಷಣ ಸರಿಪಡಿಸಬೇಕು. ನೌಕರರು ಭಯವಿಲ್ಲದೆ ತಮ್ಮ ಅಹವಾಲು ಸಲ್ಲಿಸುವ ವಾತಾವರಣವನ್ನೂ ಸರ್ಕಾರ ನಿರ್ಮಿಸಬೇಕು.
ಕಲ್ಯಾಣ ಕರ್ನಾಟಕ ಎಂಬುದು ಕೇವಲ ಹೆಸರಾಗದೆ, 371(ಜೆ)ಯ ಆಶಯ ನೌಕರರ ಬದುಕಿನಲ್ಲೂ ಕಾಣಿಸಬೇಕು. ವರ್ಷಗಳ ಸೇವೆ ಸಲ್ಲಿಸಿದ ಸ್ಥಳೀಯ ನೌಕರರ ಪದೋನ್ನತಿ ಕನಸು ಕಮರದಂತೆ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕು ಎಂಬುದು ನೌಕರರ ಒತ್ತಾಯವಾಗಿದೆ.


ಸಿದ್ದಯ್ಯ ಹೆಸರೂರು
ಮಸ್ಕಿ..

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST