ರಾಯಚೂರು: ಒಂದೆಡೆ ಬರಗಾಲದ ಸಂಕಷ್ಟ, ಮತ್ತೊಂದೆಡೆ ನಗರದ ಜನರಿಗೆ ಕಳ್ಳರ ಕಾಟ, ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿರುವ ವಿವಿಧ ಬಡಾವಣೆಗಳಲ್ಲಿ ಕಳ್ಳರ ಓಡಾಟ ಹೆಚ್ಚಾಗಿದ್ದು, ಸಿಸಿಕ್ಯಾಮೆರಾದಲ್ಲಿ ಓಡಾಟ ಸೆರೆಯಾಗಿದ್ದು ನಿವಾಸಿಗಳಲ್ಲಿ ಆತಂಕ ಮೂಡಿದೆ.

ಬೀಗ ಹಾಕಿರುವ ಮನೆಗಳು ಹಾಗೂ ಮನೆಯ ಹೊರಗೆ ಇಡಲಾಗಿರುವ ಗ್ಯಾಸ್ ಸೇರಿ ವಿವಿಧ ವಸ್ತುಗಳನ್ನೇ ಟಾರ್ಗೆಟ್ ಮಾಡುತ್ತಿರುವ ಕಳ್ಳರು, ಬೆಳಗಿನ ಜಾವ 2ರಿಂದ 4 ಗಂಟೆಯ ಅವಧಿಯಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಕಳೆದ ಎರಡು ವಾರಗಳಲ್ಲಿ ನಾಲ್ಕು ಕಡೆ ಕಳ್ಳತನಕ್ಕೆ ಯತ್ನಿಸಿರುವ ಆರೋಪ ಕೇಳಿಬಂದಿದೆ. ಆಫಿಸರ್ಸ್ ಬಡಾವಣೆಯಲ್ಲಿ ಕಳ್ಳನೋರ್ವ ಕೈಯಲ್ಲಿ ಲಾಂಗ್ ಹಿಡಿದುಕೊಂಡು ಓಡಾಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಇದೀಗ K2 ಕನ್ನಡ ನ್ಯೂಸ್ ಗೆ ಲಭ್ಯವಾಗಿದೆ.
ಇನ್ನು ಎರಡು ಮನೆಗಳ ಹೊರಭಾಗದಲ್ಲಿ ಕನೆಕ್ಷನ್ ನೀಡಲಾಗಿದ್ದ ಗ್ಯಾಸ್ ಸಿಲಿಂಡರ್‌ಗಳನ್ನು ಖದೀಮರು ಕದ್ದೊಯ್ದಿರುವುದಾಗಿ ನಿವಾಸಿಗಳು ತಿಳಿಸಿದ್ದಾರೆ. ರಾತ್ರಿ ವೇಳೆ ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ಕಳ್ಳರ ಓಡಾಟದಿಂದ ಬಡಾವಣೆಯ ಜನರು ಭಯಭೀತರಾಗಿದ್ದಾರೆ.
ಘಟನೆ ಕುರಿತು ಈಗಾಗಲೇ ಪೊಲೀಸರ ಗಮನಕ್ಕೆ ತರಲಾಗಿದ್ದು, ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸುವಂತೆ ನಿವಾಸಿಗಳು ಮನವಿ ಮಾಡಿದ್ದ ಹಿನ್ನೆಲೆ ಈಗಾಗಲೆ ಗಸ್ತು ಹೆಚ್ಚಿಸಿದ ಪೊಲೀಸರು, ಸಿಸಿ ಕ್ಯಾಮೆರಾ ದೃಶ್ಯಗಳ ಆಧಾರದ ಮೇಲೆ ಕಳ್ಳರ ಪತ್ತೆಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.