ರಾಯಚೂರು: ಕಾಂಟೇನರ್ ಲಾರಿಯ ಹಿಂಬದಿ ಚಕ್ರಕ್ಕೆ ದ್ವಿಚಕ್ರ ವಾಹನ ಸಿಲುಕಿದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ಘಟನೆ ಸಿಂಧನೂರು ನಗರದ ಗಂಗಾವತಿ ರಸ್ತೆಯಲ್ಲಿ ನಡೆದಿದೆ.
ಸಿಂಧನೂರಿನ ಬ್ಯಾಂಕ್ ಆಫ್ ಬರೋಡಾ ರಸ್ತೆ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ. ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಸಾಗುತ್ತಿದ್ದ ಲಾರಿಯ ಹಿಂಬದಿ ಚಕ್ರಕ್ಕೆ ಸಿಲುಕಿದ್ದಾರೆ. ಅಪಘಾತದ ರಭಸಕ್ಕೆ ಅವರ ತಲೆ ಹಾಗೂ ಕೈಗಳಿಗೆ ಗಂಭೀರ ಗಾಯಗಳಾಗಿ, ತಲೆ ಛಿದ್ರಗೊಂಡಿದ್ದು, ದೇಹದ ಭಾಗಗಳಿಗೆ ತೀವ್ರ ಹಾನಿಯಾಗಿದೆ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಹೊಸಪೇಟೆ ಮೂಲದ ಚಿನ್ನಪ್ಪ (70) ಎಂದು ಗುರುತಿಸಲಾಗಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಿಂಧನೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತದಿಂದ ಕೆಲಕಾಲ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಮೃತದೇಹವನ್ನು ಅಗತ್ಯ ಕ್ರಮಗಳ ಬಳಿಕ ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ ಹಾಗೂ ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.