ರಾಯಚೂರು : ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ಈರುಳ್ಳಿ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಬಿದ್ದು ಅಪಘಾತಕ್ಕೀಡಾಗಿದೆ. ಗ್ರಾಮದ ತಿರುವಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಲಾರಿ ಚಾಲಕ ಹಾಗೂ ಕ್ಲೀನರ್ ಗಾಯಗೊಂಡಿದ್ದಾರೆ.
ಮೂರು ದಿನಗಳ ಹಿಂದೆ ನಡೆದ ಘಟನೆಯಾಗಿದ್ದು, ಲಾರಿ ಉರುಳಿಬಿದ್ದಿರುವ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು, ಗಾಯಗೊಂಡವರ ನೆರವಿಗೆ ಧಾವಿಸುವ ಬದಲು ಲಾರಿಯಲ್ಲಿದ್ದ ಈರುಳ್ಳಿಯನ್ನು ತೆಗೆದುಕೊಂಡು ಹೋಗಲು ಮುಂದಾಗಿದ್ದಾರೆ ಎನ್ನಲಾಗಿದೆ. ಮಾನವೀಯತೆ ಮರೆತು ಸಾರ್ವಜನಿಕರು ಚೀಲಗಟ್ಟಲೆ ಈರುಳ್ಳಿಯನ್ನು ಹೊತ್ತೊಯ್ದಿದ್ದಾರೆ. ಕೇವಲ 15 ನಿಮಿಷಗಳಲ್ಲೇ ಲಾರಿಯಲ್ಲಿದ್ದ ಬಹುತೇಕ ಈರುಳ್ಳಿ ಖಾಲಿಯಾಗಿದೆ ಎಂದು ತಿಳಿದುಬಂದಿದೆ.
ಗಾಯಗೊಂಡ ಚಾಲಕ ಮತ್ತು ಕ್ಲೀನರ್ರನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡುವ ಬದಲು ಈರುಳ್ಳಿ ಕೊಂಡೊಯ್ಯಲು ಜನರು ಮುಗಿಬಿದ್ದ ದೃಶ್ಯ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.