LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನವೋದಯ ಶಿಕ್ಷಣ ಸಂಸ್ಥೆ–IIIT ರಾಯಚೂರು ನಡುವೆ ಮಹತ್ವದ ಒಡಂಬಡಿಕೆ

ಆರೋಗ್ಯ, ಆಹಾರ, ಪರಿಸರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜಂಟಿ ಸಂಶೋಧನೆಗೆ ಒತ್ತು

ರಾಯಚೂರು: ಮುಂದಿನ ಪೀಳಿಗೆಯ ಶೈಕ್ಷಣಿಕ ಸಂಶೋಧನೆಗೆ ಉತ್ತೇಜನ ನೀಡುವ ಹಾಗೂ ಆರೋಗ್ಯ, ಆಹಾರ, ಪರಿಸರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸುವ ಉದ್ದೇಶದಿಂದ ನವೋದಯ ಶಿಕ್ಷಣ ಸಂಸ್ಥೆ ಮತ್ತು ರಾಯಚೂರಿನ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (IIIT) ನಡುವೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ನಗರದ ನವೋದಯ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ನಿರ್ದೇಶಕ ಡಾ. ಹರೀಶ ಕುಮಾರ ಸರದಾನ, ಈ ಒಡಂಬಡಿಕೆ ರಾಯಚೂರು ಭಾಗದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ. ಎರಡೂ ಸಂಸ್ಥೆಗಳ ಸಹಯೋಗದಿಂದ ಸಂಶೋಧನೆ ಹಾಗೂ ನವೀನ ಆವಿಷ್ಕಾರಗಳಿಗೆ ಉತ್ತೇಜನ ದೊರೆಯಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಬೆಳಗಾವಿಯ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ನಿರ್ದೇಶಕ ಡಾ. ಮನೀಶ್ ಬರವಾಲಿಯಾ ಮಾತನಾಡಿ, ನಾಳೆಯ ಒಳಿತಿಗಾಗಿ ಇಂದು ಉತ್ತಮ ನಿರ್ಧಾರಗಳನ್ನು ಕೈಗೊಳ್ಳಬೇಕು. ಇಂತಹ ಸಹಯೋಗಗಳು ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿವೆ ಎಂದರು. ನವೋದಯ ಶಿಕ್ಷಣ ಸಂಸ್ಥೆಯಲ್ಲಿ ಸಂಶೋಧನೆಗೆ ಸಾಕಷ್ಟು ಅವಕಾಶಗಳಿದ್ದು, ಅವುಗಳ ಪ್ರಯೋಜನವನ್ನು ಸಂಶೋಧಕರು ಹಾಗೂ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಡಾ. ಅಮೃತ ರೆಡ್ಡಿ ಮತ್ತು ಡಾ. ಹರೀಶ ಕುಮಾರ ಸರದಾನ ಅವರು ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದರು.

ಸಂಸ್ಥೆಯ ಕುಲಸಚಿವ ಡಾ. ಟಿ. ಶ್ರೀನಿವಾಸ ಮಾತನಾಡಿ, ಅಭಿವೃದ್ಧಿಗೆ ಸಂಶೋಧನೆ ಅತ್ಯಗತ್ಯ. ಸಂಸ್ಥೆಯ ವತಿಯಿಂದ ಇದುವರೆಗೆ 600 ಸಂಶೋಧನಾ ಪ್ರಕಟಣೆಗಳು, 30 ಅನುದಾನಗಳು ಹಾಗೂ 10 ಪೇಟೆಂಟ್‌ಗಳು ಲಭಿಸಿರುವುದು ಶೈಕ್ಷಣಿಕ ಸಾಧನೆಗೆ ಸಾಕ್ಷಿಯಾಗಿದೆ ಎಂದರು.

ಸಂಶೋಧನೆಗೆ ಅನುದಾನ ಪಡೆದ ಸಿಬ್ಬಂದಿಯನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಿ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೈಕ್ಷಣಿಕ ಅಭಿವೃದ್ಧಿ ಮತ್ತು ಸಂಶೋಧನೆಯ ನಿರ್ದೇಶಕ ಡಾ. ರಾಮಮೋಹನ ಗುಪ್ತಾ ವಹಿಸಿದ್ದರು.

ಆಡಳಿತ ನಿರ್ದೇಶಕ ಡಾ. ಸುರೇಶಬಾಬು, ನವೋದಯ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಗುರುದತ್ತ ಪವಾರ್, ನವೋದಯ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ಎ.ಎಸ್. ಆನಂದ ಸ್ವಾಗತಿಸಿದರು. ಇಮ್ಯಾನುಯೆಲ್ ಮತ್ತು ತಬಿತಾ ಕಾರ್ಯಕ್ರಮ ನಿರೂಪಿಸಿದರು.

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST