ರಸ್ತೆ ಬದಿಯಲ್ಲಿ ಸಸಿಗಳನ್ನು ನೆಡುವ ವಿಚಾರಕ್ಕೆ ಸಂಬಂಧಿಸಿದಂತೆ ರೈತನ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಯರದೊಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಐದು ಜನ ಅಧಿಕಾರಿಗಳು ಹಲ್ಲೆ ಮಾಡಿದ್ದಾರೆ ಎಂದು ರೈತ ರಮೇಶ್ ನಾಯಕ್ ಆರೋಪಿಸಿದ್ದಾರೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಯರದೊಡ್ಡಿ ಗ್ರಾಮ ಘಟನೆ ನಡೆದಿದ್ದು, ಇಲ್ಲಿನ ರೈತ ರಮೇಶ್ ನಾಯಕ್ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಯರದೊಡ್ಡಿ ಗ್ರಾಮದ ಸರ್ವೇ ನಂಬರ್ 29ರ ರಸ್ತೆ ಬದಿಯ ಜಮೀನಿನ ವಿಚಾರವಾಗಿ ವಿವಾದ ಉಂಟಾಗಿತ್ತು ಎನ್ನಲಾಗಿದೆ. ರಸ್ತೆ ಬದಿಯಲ್ಲಿ ಸಸಿಗಳನ್ನು ನೆಡುವ ಸಂಬಂಧ ಅಧಿಕಾರಿಗಳು ಹಾಗೂ ರೈತನ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.
ಗುರುವಾರ ಮಧ್ಯಾಹ್ನ ಸುಮಾರು 2 ಗಂಟೆಯಿಂದ ತಡರಾತ್ರಿವರೆಗೆ ಹಲ್ಲೆ ನಡೆಸಲಾಗಿದೆ ಎಂದು ರಮೇಶ್ ನಾಯಕ್ ಆರೋಪಿಸಿದ್ದಾರೆ. ಘಟನೆಯಿಂದ ರೈತ ರಮೇಶ್ ನಾಯಕ್ ಗಾಯಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಎಂಎಲ್‌ಸಿ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಬೇಕು ಎಂದು ರೈತ ಕುಟುಂಬ ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ. ರೈತನ ಮೇಲೆ ಹಲ್ಲೆ ನಡೆಸಿದರೆಂದು ಆರೋಪಿಸಲಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬಂದಿದೆ. ಆದರೆ, ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳ ನಿಖರ ಪ್ರತಿಕ್ರಿಯೆ ಇನ್ನಷ್ಟೇ ಹೊರಬರಬೇಕಿದೆ. ಪೊಲೀಸ್ ತನಿಖೆಯ ಬಳಿಕ ಹಲ್ಲೆಯ ನಿಜವಾದ ಕಾರಣ ಹಾಗೂ ಘಟನೆಯ ಸಂಪೂರ್ಣ ವಿವರಗಳು ಬಹಿರಂಗವಾಗಬೇಕಿದೆ.
ಇನ್ನೂ ರಸ್ತೆ ಬದಿಯಲ್ಲಿ ಸಸಿಗಳನ್ನು ನೆಡುವ ವಿಚಾರವಾಗಿ ಆರಂಭವಾದ ವಿವಾದ, ಇದೀಗ ರೈತನ ಮೇಲೆ ಹಲ್ಲೆ ಆರೋಪದವರೆಗೆ ತಲುಪಿದೆ. ಘಟನೆ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಹೊರತರಬೇಕು ಎಂಬ ಒತ್ತಾಯ ಕೇಳಿಬಂದಿದೆ.