ಮಾನ್ವಿ : ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ನಡೆದ ಕ್ಷುಲ್ಲಕ ಜಗಳ ವಿಕೋಪಕ್ಕೆ ತಿರುಗಿ, ಸ್ನೇಹಿತನ ತಲೆ ಮೇಲೆ ಕಲ್ಲು ಎತ್ತಿಹಾಕಿ, ಭೀಕರವಾಗಿ ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದ್ದು ಕೊಲೆ ಮಾಡಿದ ನಂತರ ಆರೋಪಿಗಳು ನೇರವಾಗಿ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾರೆ. ಅಷ್ಟಕ್ಕೂ ಆಗಿದ್ದಾದ್ರು ಏನು ಅಂತೀರಾ ಈ ಸ್ಟೋರಿ ನೋಡಿ.
ಹೌದು ಕುಡಿದ ಅಮಲಿನಲ್ಲಿ ಸ್ನೇಹಿತನಿಗೆ ಚಟ್ಟ ಕಟ್ಟಿದ್ದಾರೆ ಸ್ನೇಹಿತರು. ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಬಸ್ ನಿಲ್ದಾಣದ ಹಿಂದುಗಡೆ ಇರುವ ಇಂದಿರಾ ನಗರದ ಮೃತ ವಸೀಂ ಮನೆಯಲ್ಲಿ ಜುಬೇರ್, ಶಾರುಖ್ ಮೂವರು ಸ್ನೇಹಿತರು ಅಂದಿನ ಕೆಲಸ ಮುಗಿದ ನಂತರ ಎಣ್ಣೆ ಪಾರ್ಟಿ ಮಾಡಿದ್ದಾರೆ. ಈ ವೇಳೆ ಸ್ವಲ್ಪ ನಶೆ ಏರುತ್ತಿದ್ದಂತೆ ಮೃತ ವಸೀಂ ಮತ್ತು ಇಬ್ಬರು ಸ್ನೇಹಿತರ ನಡುವೆ ಯಾವುದೋ ಕಾರಣಕ್ಕೆ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಈ ಒಂದು ಕಿತ್ತಾಟ ತಾರಕಕ್ಕೆ ಏರಿದೆ. ಈ ವೇಳೆ ಕೋಪಗೊಂಡ ಜುಬೇರ್ ಮತ್ತು ಶಾರುಖ್ ಇಬ್ಬರು ವಸೀಂನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಂದಿದ್ದಾರೆ. ಗುರುವಾರ ರಾತ್ರಿ 9 ಗಂಟೆ ವೇಳೆಯಲ್ಲಿ ವಸೀಂ ಮೇಲೆಕಲ್ಲು ಎತ್ತಿ ಹಾಕಿ ಸ್ಥಳದಲ್ಲೇ ಕೊಲೆ ಮಾಡಿದ್ದಾರೆ. ನಂತರ ತಾವೇ ಕೊಲೆ ಮಾಡಿರುವುದಾಗಿ ಠಾಣೆಗೆ ಹೋಗಿ ಶರಣಾಗಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಠಾಣೆಯ ಸಿಬ್ಬಂದಿಗಳು. ಮೃತ ವಾಸಿಂ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತ ಮತ್ತು ಇಬ್ಬರು ಆರೋಪಿಗಳ ಹಿನ್ನೆಲೆ ನೋಡಿದಾಗ ಇವರ ಮೇಲೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ವಿವಿಧ ಕಳ್ಳತನ ಪ್ರಕರಣಗಳು ಕೂಡ ದಾಖಲಾಗಿವೆ. ಈ ಕಳ್ಳತನ ಮಾಡಿದಾಗ ಹಣ ಹಂಚಿಕೆ ವಿಚಾರದಲ್ಲಿ ಏನಾದ್ರು ಜಗಳಗಳು ಆಗಿರಬಹುದು ಎಂದು ಸಾರ್ವಜನಕವಾಗಿ ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನೂ ಕೊಲೆ ಮಾಡಿ ಶರಣದ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಪ್ರಸ್ತುತಪಡಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ ಎಂದು ರಾಯಚೂರು ಎಸ್ಪಿ ಅರುಣಾಂಗ್ಷು ಗಿರಿ ಅವರು ಮಾಹಿತಿ ನೀಡಿದ್ದಾರೆ. ಒಟ್ಟಾರೆ ಯುವಕರು ಕುಡಿತದ ಅಮಲಿನಲ್ಲಿ ಓರ್ವ ಸ್ನೇಹಿತನ ಜೀವ ಪಡೆದಿದ್ದು ಅಂತಹ ಸಿಟ್ಟು ಏನಿತ್ತು ಎಂಬುದೇ ಪ್ರಶ್ನೆಯಾಗಿದೆ. ಅದೇನೆ ಇರಲಿ ಸದ್ಯ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೊಲೆಗೆ ನಿಖರ ಕಾರಣವನ್ನು ಪೊಲೀಸರು ಹುಡುಕುತ್ತಿದ್ದಾರೆ.