ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ಬಸ್, ಆಟೋರಿಕ್ಷಾ ಹಾಗೂ ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದು, ಮೃತರನ್ನು ಜಾಲಹಳ್ಳಿ ಗ್ರಾಮದ ಉದಯ (20) ಹಾಗೂ ವಿಜಯ್ (17) ಎಂದು ಗುರುತಿಸಲಾಗಿದೆ.
ಇಬ್ಬರು ಯುವಕರು ಬೈಕ್‌ನಲ್ಲಿ ಜಾಲಹಳ್ಳಿ ಕಡೆಯಿಂದ ತಿಂಥಣಿ ಬ್ರಿಜ್ ಕಡೆಗೆ ತೆರಳುತ್ತಿದ್ದರು. ಇದೇ ವೇಳೆ ಅದೇ ಮಾರ್ಗದಲ್ಲಿ ಸಾರಿಗೆ ಬಸ್ ಸಂಚರಿಸುತ್ತಿತ್ತು. ಎದುರಿನಿಂದ ಆಟೋರಿಕ್ಷಾವೊಂದು ಜಾಲಹಳ್ಳಿ ಕಡೆಗೆ ಬರುತ್ತಿತ್ತು. ಈ ಸಂದರ್ಭದಲ್ಲಿ ಬಸ್, ಆಟೋ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ.
ಅಪಘಾತದ ರಭಸಕ್ಕೆ ಬೈಕ್ ಸವಾರರಾದ ಉದಯ ಹಾಗೂ ವಿಜಯ್ ಸಾರಿಗೆ ಬಸ್‌ನ ಚಕ್ರದಡಿ ಸಿಲುಕಿದ್ದಾರೆ. ಇಬ್ಬರ ದೇಹದ ಮೇಲೆಯೇ ಬಸ್ ಹರಿದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು ಮತ್ತೋರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿ, ಟ್ರಾಫಿಕ್ ಜಾಮ್ ಆಗಿತ್ತು.
ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.