ದೇವದುರ್ಗ : ಪಟ್ಟಣದ ಗೌರಂಪೇಟೆ ಸೇರಿದಂತೆ ವಿವಿಧ ಬೆಟ್ಟ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂಬ ವದಂತಿ ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿಯೂ ಚಿರತೆ ಪ್ರತ್ಯಕ್ಷವಾಗಿದೆ ಎಂಬ ಸಂದೇಶಗಳು ಹಾಗೂ ಚಿತ್ರಗಳು ವ್ಯಾಪಕವಾಗಿ ಹರಿದಾಡುತ್ತಿದ್ದು, ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ ಶನಿವಾರ ತಹಶೀಲ್ದಾರ್ ನಾಗಮ್ಮ ಕಟ್ಟಿಮನಿ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪುರಸಭೆ ಸಿಬ್ಬಂದಿ ಗೌರಂಪೇಟೆ ಬೆಟ್ಟಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಬೆಟ್ಟದ ವಿವಿಧ ಪ್ರದೇಶಗಳಲ್ಲಿ ಸುತ್ತಾಡಿ ಚಿರತೆ ಇರುವಿಕೆಯ ಕುರಿತು ಪರಿಶೀಲನೆ ನಡೆಸಿದ ಅಧಿಕಾರಿಗಳು, ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿರತೆ ಪ್ರತ್ಯಕ್ಷವಾಗಿದೆ ಎನ್ನಲಾದ ಚಿತ್ರವನ್ನು ಅಧಿಕಾರಿಗಳು ಪರಿಶೀಲಿಸಿದ್ದು, ಅದು ನಕಲಿ ಚಿತ್ರವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಚಿರತೆ ಕಾಣಿಸಿಕೊಂಡಿದೆ ಎಂಬುದಕ್ಕೆ ಯಾವುದೇ ದೃಢವಾದ ಸಾಕ್ಷ್ಯ ಅಥವಾ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹಾಗೂ ನಕಲಿ ಚಿತ್ರಗಳನ್ನು ಹಂಚಿಕೊಂಡು ಸಾರ್ವಜನಿಕರಲ್ಲಿ ಆತಂಕ ಮತ್ತು ಭಯದ ವಾತಾವರಣ ಸೃಷ್ಟಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಸ್ಥಳೀಯರು ಯಾವುದೇ ಅನುಮಾನಾಸ್ಪದ ಮಾಹಿತಿ ಕಂಡುಬಂದರೆ ಅರಣ್ಯ ಇಲಾಖೆ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮಾಹಿತಿಯನ್ನು ಪರಿಶೀಲಿಸದೆ ಹಂಚಿಕೊಳ್ಳಬಾರದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.