ರಾಯಚೂರು: ಜಿಲ್ಲೆ ಹಾಗೂ ನಗರದಲ್ಲಿ ಸಹಕಾರ ಸಂಘಗಳ ಅಡಿಯಲ್ಲಿ ನಡೆಯುತ್ತಿರುವ ನ್ಯಾಯಬೆಲೆ ಅಂಗಡಿಗಳ ನಿರ್ವಹಣೆ ಕುರಿತು ಇದೀಗ ಹಲವು ಪ್ರಶ್ನೆಗಳು ಉದ್ಬವವಾಗಿವೆ. ಸಹಕಾರ ಸಂಘಗಳನ್ನು ನಿಯಮಾನುಸಾರ ನವೀಕರಣ ಮಾಡಿಸದೇ ಹಾಗೂ ಪ್ರತಿ ವರ್ಷ ಲೆಕ್ಕಪರಿಶೋಧನೆ (ಅಡಿಟ್) ಮಾಡಿಸದೇ ಕೆಲವು ಸಂಘಗಳ ಅಡಿಯಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಜಿಲ್ಲೆಯಲ್ಲಿ ಸಹಕಾರ ಸಂಘಗಳ ಅಡಿಯಲ್ಲಿ ಸುಮಾರು 120 ಹಾಗೂ ರಾಯಚೂರು ನಗರದಲ್ಲಿ ಸುಮಾರು 20 ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ ಎನ್ನಲಾಗಿದೆ. ನ್ಯಾಯಬೆಲೆ ಅಂಗಡಿ ನಡೆಸುವ ಸಹಕಾರ ಸಂಘಗಳು ಸಹಕಾರ ಇಲಾಖೆಯ ನೋಂದಣಿ ಕಚೇರಿಯಲ್ಲಿ ನೋಂದಣಿಯಾಗಿದ್ದು, ಪ್ರತಿ ಐದು ವರ್ಷಕ್ಕೊಮ್ಮೆ ನವೀಕರಣ ಮಾಡಿಸಬೇಕು ಹಾಗೂ ಪ್ರತಿವರ್ಷ ಲೆಕ್ಕಪರಿಶೋಧನೆ ಮಾಡಿಸಬೇಕೆಂಬ ನಿಯಮವಿದೆ. ಮಾಹಿತಿ ಪ್ರಕಾರ ಸುಮಾರು 23 ವರ್ಷಗಳಿಂದ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂಬ ಗಂಭೀರ.
ಆದರೆ ಕೆಲವು ಸಹಕಾರ ಸಂಘಗಳು ಹಲವು ವರ್ಷಗಳಿಂದ ನವೀಕರಣ ಮಾಡಿಸದೇ ಹಾಗೂ ವಾರ್ಷಿಕ ಅಡಿಟ್ ನಡೆಸದೇ ನ್ಯಾಯಬೆಲೆ ಅಂಗಡಿಗಳನ್ನು ಮುಂದುವರಿಸಿಕೊಂಡು ಹೋಗುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಬಗ್ಗೆ ಸಹಕಾರ ಇಲಾಖೆ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಲಾಗಿದೆ.
ಮೂರು ವರ್ಷಗಳ ಕಾಲ ಅಡಿಟ್ ಮಾಡಿಸದ ಸಹಕಾರ ಸಂಘಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಂಡು, ಸಂಘವನ್ನು ಸೂಪರ್‌ಸೀಡ್ ಮಾಡಿ ನ್ಯಾಯಬೆಲೆ ಅಂಗಡಿ ಪರವಾನಗಿ ರದ್ದುಪಡಿಸಬೇಕು. ಆದರೆ ಇಲ್ಲಿ ವ್ಯವಸ್ಥಿತವಾಗಿ ನಿಯಮಗಳನ್ನು ಉಲ್ಲಂಘನೆ ಮಾಡಿ ನ್ಯಾಯಬೆಲೆ ಅಂಗಡಿಗಳು ನಡೆಸುತ್ತಿದ್ದರು ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ.
ಸಹಕಾರಿ ಇಲಾಖೆ, ಆಹಾರ ಇಲಾಖೆ ಮತ್ತು ಆಡಿಟ್ ವರದಿ ಪರಿಶೀಲನೆ ಮಾಡಬೇಕಾದ ಅಧಿಕಾರಿಗಳು ಯಾಕೆ ಕಣ್ಣು ಮುಚ್ಚಿ ಕುಳಿತಿದ್ದಾರೆ. ಅಥವಾ ಕಂಡು ಕಾಣದಂತೆ ವರ್ತಿಸಿ ಅಕ್ರಮಕ್ಕೆ ಸಾತ್ ನೀಡುತ್ತಿದ್ದಾರಾ ಎಂಬ ಸಾಕಷ್ಟು ಅನುಮಾನಗಳು ಕಾಡುತ್ತಿವೆ. ರಾಯಚೂರು ನಗರದಲ್ಲಿ ಸುಮಾರು ಐದಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಗಳು ನಡೆಸುತ್ತಿರುವ ಸಹಕಾರಿ ಸಂಘಗಳು, ಆಡಿಟ್ ವರದಿ ಮಾಡಿಸಿಲ್ಲ, ಚುನಾವಣೆ ಮಾಡಿಲ್ಲ, ನವೀಕರಣ ಮಾಡಿಲ್ಲ ಆದರೂ ಪ್ರಗತಿಯಲ್ಲಿರುವುದು ಹೇಗೆ ಎಂಬ ಪ್ರಶ್ನೆಗಳು ಹುಟ್ಟುತ್ತವೆ. ಇನ್ನಾದರು ಅಧಿಕಾರಿಗಳು ಪರಿಶೀಲನೆ ನಡೆಸಿ, ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕ್ರಮ ಕೈಗೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.