ನೇಪಾಳ-ಟಿಬೆಟ್ ಗಡಿಯಲ್ಲಿ ಬುಧವಾರ ಸಂಭವಿಸಿದ ದಿಢೀರ್ ಪ್ರವಾಹ ಭೀಕರ ದುರಂತ ಸೃಷ್ಟಿಸಿದೆ. ಉತ್ತರ ನೇಪಾಳದ ರಸುವಾ ಮತ್ತು ಧಾಡಿಂಗ್ ಜಿಲ್ಲೆಗಳಲ್ಲಿ ಬೆಳಿಗ್ಗೆ 9ರ ಸುಮಾರಿಗೆ ಏಕಾಏಕಿ ನದಿಗಳು ಉಕ್ಕಿ ಹರಿದ ಪರಿಣಾಮ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ 105 ಮಂದಿ ಭಾರತೀಯರು ಹಾಗೂ 37 ಮಂದಿ ಎನ್‌ಆರ್‌ಐಗಳು ಸೇರಿದ್ದಾರೆ ಎನ್ನಲಾಗಿದೆ.
https://youtube.com/shorts/h486uANZrVI?si=wNecFIdmMAmhz5xX
ಭೋಟೆ ಕೊಶಿ ನದಿಯಲ್ಲಿ ಸಂಭವಿಸಿದ ಹಿಮಕುಸಿತದಿಂದ ನೀರಿನ ಮಟ್ಟ ದಿಢೀರ್ ಏರಿಕೆಯಾಗಿರುವುದು ಪ್ರವಾಹಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಈ ನದಿ ಟಿಬೆಟ್‌ನಿಂದ ನೇಪಾಳದವರೆಗೆ ಹರಿಯುತ್ತಿದ್ದು, ಹಿಮಕುಸಿತ ಸಂಭವಿಸಿದ ನಿಖರ ಸ್ಥಳ ಇನ್ನೂ ಸ್ಪಷ್ಟವಾಗಿಲ್ಲ.
ಪ್ರವಾಹದ ರಭಸಕ್ಕೆ ರಸ್ತೆಗಳು, ಸೇತುವೆಗಳು ಮತ್ತು ಹಲವು ಮನೆಗಳು ಕೊಚ್ಚಿಹೋಗಿವೆ. ಟಿಬೆಟ್ ಗಡಿಯಲ್ಲಿರುವ ವಿದ್ಯುತ್ ಸ್ಥಾವರಗಳಿಗೂ ಹಾನಿಯಾಗಿದ್ದು, ರಸ್ತೆ, ವಿದ್ಯುತ್ ಹಾಗೂ ಸಂವಹನ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಗ್ಯಿರೊಂಗ್ ಬಂದರಿನ ಸಂಪರ್ಕವೂ ಕಡಿತಗೊಂಡಿದೆ.
ಇನ್ನೂ ನದಿಯ ಮೇಲ್ಭಾಗದಲ್ಲಿ ಮತ್ತೊಂದು ಹಿಮಸ್ಫೋಟದ ಸಾಧ್ಯತೆ ಕಂಡುಬಂದಿರುವುದರಿಂದ ಎರಡನೇ ಹಂತದ ಪ್ರವಾಹದ ಆತಂಕ ಎದುರಾಗಿದೆ. ಪರಿಸ್ಥಿತಿ ಭಾರತದ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿಂದ ಮುನ್ನೆಚ್ಚರಿಕೆ ನೀಡಲಾಗಿದೆ.
ಪೊಲೀಸ್ ಮತ್ತು ಸೇನಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ನೀರಿನ ಮಟ್ಟ ಇಳಿದ ಬಳಿಕ ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲು ಸಿದ್ಧತೆ ನಡೆಸಲಾಗಿದೆ. ನದಿಪಾತ್ರದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.