ಲಿಂಗಸುಗೂರು : ಜಿಲ್ಲೆಯ ಲಿಂಗಸುಗೂರು ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಸಾರ್ವಜನಿಕವಾಗಿ ಚಪ್ಪಲಿ ಏಟು ಬಿದ್ದಿರುವ ಘಟನೆ ನಡೆದಿದೆ. ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯ ಬಳಿ ಬಂದ ಯುವಕ, ಒಂಟಿತನ ನೋಡಿ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.
ಯುವಕನ ಈ ಅಸಭ್ಯ ವರ್ತನೆಯಿಂದ ಆಕ್ರೋಶಗೊಂಡ ಮಹಿಳೆ, ತಕ್ಷಣವೇ ತನ್ನ ಕಾಲಲ್ಲಿದ್ದ ಚಪ್ಪಲಿ ತೆಗೆದು ಆತನಿಗೆ ಮನಬಂದಂತೆ ಥಳಿಸಿದ್ದಾರೆ. ಇದನ್ನು ಗಮನಿಸಿದ ಸುತ್ತಮುತ್ತಲಿನ ಸಹ ಪ್ರಯಾಣಿಕರು ಹಾಗೂ ಸಾರ್ವಜನಿಕರು ತಕ್ಷಣವೇ ಮಹಿಳೆಯ ನೆರವಿಗೆ ಧಾವಿಸಿದ್ದು, ಕಿರುಕುಳ ನೀಡಿದ ಯುವಕನಿಗೆ ಹಿಗ್ಗಾಮುಗ್ಗಾ ಧರ್ಮದೇಟು ನೀಡಿದ್ದಾರೆ.
ಜನರಿಂದ ತೀವ್ರ ಪೆಟ್ಟು ತಿಂದ ಯುವಕನು ಅವಮಾನ ಹಾಗೂ ಮುಖಭಂಗದಿಂದ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಈ ಘಟನೆಯು ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಿಡಿಗೇಡಿಗೆ ಪಾಠ ಕಲಿಸಿದ ಮಹಿಳೆಯ ಧೈರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.