
ರಾಯಚೂರು: ಜಿಲ್ಲೆಯಲ್ಲೇ ಬೀದಿ ನಾಯಿಗಳ ಹಾವಳಿ ಆತಂಕ ಸೃಷ್ಟಿಸುತ್ತಿರುವ ನಡುವೆ ಮತ್ತೊಂದು ಭೀಕರ ದಾಳಿ ನಡೆದಿದ್ದು, ನಾಲ್ಕು ವರ್ಷದ ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ರಾಯಚೂರು ತಾಲೂಕಿನ ಮಲಿಬಾದ್ ಗ್ರಾಮದಲ್ಲಿ ನಡೆದಿದೆ.
ಗಾಯಗೊಂಡ ಬಾಲಕನನ್ನು ಗೋಪಾಲ್ (4) ಎಂದು ಗುರುತಿಸಲಾಗಿದೆ. ಮಳೆಯ ನಡುವೆ ಗ್ರಾಮದ ಅಂಗಡಿಗೆ ತೆರಳುತ್ತಿದ್ದ ವೇಳೆ ಏಕಾಏಕಿ ಬೀದಿ ನಾಯಿ ಬಾಲಕನ ಮೇಲೆ ಎರಗಿದೆ. ಸುತ್ತಮುತ್ತ ಯಾರೂ ಇಲ್ಲದ ಕಾರಣ ಬಾಲಕ ಒಂಟಿಯಾಗಿ ನಾಯಿಯೊಂದಿಗೆ ಹೋರಾಡಿದ್ದಾನೆ. ಈ ವೇಳೆ ನಾಯಿ ಬಾಲಕನ ತಲೆಯ ಭಾಗವನ್ನು ಭೀಕರವಾಗಿ ಕಚ್ಚಿ, ಕೂದಲಿನೊಂದಿಗೆ ತಲೆಯ ಚರ್ಮವನ್ನೇ ಕಿತ್ತು ಹಾಕಿದೆ ಎಂದು ತಿಳಿದುಬಂದಿದೆ.
ಕೊನೆಗೆ ನಾಯಿಯ ಹಿಡಿತದಿಂದ ತಪ್ಪಿಸಿಕೊಂಡ ಬಾಲಕ ರಕ್ತಸಿಕ್ತ ಸ್ಥಿತಿಯಲ್ಲಿ ಮನೆಗೆ ಓಡಿ ಬಂದಿದ್ದಾನೆ. ಬಾಲಕನ ಸ್ಥಿತಿ ಕಂಡು ಬೆಚ್ಚಿಬಿದ್ದ ಪೋಷಕರು ಕೂಡಲೇ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಬಾಲಕನಿಗೆ ತುರ್ತು ಚಿಕಿತ್ಸೆ ನೀಡಿದ್ದು, ಸದ್ಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಬಾಲಕನ ಸ್ಥಿತಿ ಗಂಭೀರವಾಗಿದ್ದು, ವೈದ್ಯರ ನಿಗಾದಲ್ಲಿದ್ದಾನೆ.
ಮಲಿಬಾದ್ ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಮಕ್ಕಳನ್ನು ಹೊರಗೆ ಕಳುಹಿಸಲು ಪೋಷಕರು ಹೆದರುತ್ತಿದ್ದು, ಬೀದಿ ನಾಯಿಗಳ ನಿಯಂತ್ರಣಕ್ಕೆ ಸ್ಥಳೀಯ ಆಡಳಿತ ಹಾಗೂ ಸಂಬಂಧಿತ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೀದಿ ನಾಯಿಗಳ ದಾಳಿ ಪ್ರಕರಣಗಳು ಹೆಚ್ಚುತ್ತಿರುವುದು ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.