ರಾಯಚೂರು ತಹಶೀಲ್ದಾರ ಕಚೇರಿಗೆ ಸಂಬಂಧಿಸಿದ ಮಾಹಿತಿ ಹಕ್ಕು (ಆರ್‌ಟಿಐ) ಪ್ರಕರಣದಲ್ಲಿ ಕರ್ನಾಟಕ ಮಾಹಿತಿ ಆಯೋಗ ಮಹತ್ವದ ಆದೇಶ ಹೊರಡಿಸಿದೆ. ಅರ್ಜಿದಾರರು ಕೇಳಿದ್ದ ಸಂಪೂರ್ಣ ಮಾಹಿತಿಯನ್ನು ಮಾಹಿತಿ ಹಕ್ಕು ಅಧಿನಿಯಮ-2005ರ ಕಲಂ 7(6)ರ ಅನ್ವಯ 10 ದಿನಗಳೊಳಗೆ ಉಚಿತವಾಗಿ, ನೋಂದಾಯಿತ ಅಂಚೆ ಮೂಲಕ ಒದಗಿಸುವಂತೆ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ತಹಶೀಲ್ದಾರ ಗ್ರೇಡ್-2 ಶ್ರೀ ಪರಶುರಾಮ ಅವರಿಗೆ ನಿರ್ದೇಶನ ನೀಡಿದೆ.
ಪ್ರಕರಣದಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಕರ್ನಾಟಕ ಸ್ಟೇಟ್ ಪಬ್ಲಿಕ್ ರೆಕಾರ್ಡ್ಸ್ ಆಕ್ಟ್-2010 ಮತ್ತು ರೂಲ್ಸ್-2013ರ ಅನ್ವಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಥಮ ಮೇಲ್ಮನವಿ ಪ್ರಾಧಿಕಾರಿ ಹಾಗೂ ತಹಶೀಲ್ದಾರ ಗ್ರೇಡ್-1 ಶ್ರೀ ಸುರೇಶ್ ವರ್ಮಾ ಅವರಿಗೆ ಆಯುಕ್ತರಾದ ಬಿ ವೆಂಕಟಸಿಂಗ್ ಅವರು ಸೂಚಿಸಿದ್ದಾರೆ.
ಇದೇ ವೇಳೆ ಮಾಹಿತಿ ನೀಡುವಲ್ಲಿ ವಿಳಂಬ ಹಾಗೂ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ಪರಶುರಾಮ ಅವರಿಗೆ ವಿಧಿಸಿದ್ದ 5,000 ದಂಡವನ್ನು ಅವರ ವೇತನದಿಂದ ಕಡಿತಗೊಳಿಸಿ ಸರ್ಕಾರದ ನಿಗದಿತ ಖಾತೆಗೆ ಜಮಾ ಮಾಡಿ ರಶೀದಿ ಸಲ್ಲಿಸುವಂತೆ ಆದೇಶಿಸಲಾಗಿದೆ.
ಅರ್ಜಿದಾರರಿಗೆ ಮಾಹಿತಿ ನೀಡಿರುವ ದಾಖಲೆಗಳು ಹಾಗೂ ಅಂಚೆ ಸ್ವೀಕೃತಿ ಪ್ರತಿಗಳೊಂದಿಗೆ ಮುಂದಿನ ವಿಚಾರಣೆಗೆ ಖುದ್ದಾಗಿ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ ಅನುಪಾಲನಾ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಅರ್ಜಿದಾರರು ಮಾಹಿತಿ ಪಡೆದಿರುವ ಅಥವಾ ಪಡೆಯದೇ ಇರುವ ಬಗ್ಗೆ ಲಿಖಿತವಾಗಿ ಆಯೋಗಕ್ಕೆ ತಿಳಿಸಬೇಕೆಂದೂ ನಿರ್ದೇಶನ ನೀಡಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 3, 2026ರಂದು ಬೆಳಿಗ್ಗೆ 11 ಗಂಟೆಗೆ ಸಿಸ್ಕೋ ವೆಬೆಕ್ಸ್ ಅಥವಾ ಖುದ್ದಾಗಿ ನಡೆಯಲಿದೆ.