ರಾಯಚೂರು/ನಾರಾಯಣಪೇಟೆ :
ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ಕೃಷ್ಣ ಮಂಡಲದ ಗುಡೆಬಳ್ಳೂರು ಗ್ರಾಮದ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನಿಂತಿದ್ದ ಲಾರಿಗೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ, ರಾಯಚೂರಿನ ಖ್ಯಾತ ಶಿಕ್ಷಣತಜ್ಞ ಹಾಗೂ ಟ್ಯಾಗೋರ್ ಸ್ಮಾರಕ ಪದವಿ ಮಹಾವಿದ್ಯಾಲಯದ ವಿಶ್ರಾಂತ ಉಪನ್ಯಾಸಕರಾದ ಶೇಖರಪ್ಪ ಗೌಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೂಲಗಳ ಪ್ರಕಾರ, ರಾಯಚೂರಿನ ಐವರು ಭಕ್ತರು ಕರ್ನಾಟಕದ ಪ್ರಸಿದ್ಧ ಕಾಳಬೆಳಗುಂದಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ದರ್ಶನ ಮುಗಿಸಿ ಕಾರಿನಲ್ಲಿ ಊರಿಗೆ ಮರಳುತ್ತಿದ್ದಾಗ ಟೈರೋಡ್ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಇವರ ಕಾರು ನಿಯಂತ್ರಣ ತಪ್ಪಿ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಶೇಖರಪ್ಪ ಗೌಡ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ನಾಲ್ವರ ಸ್ಥಿತಿ ಗಂಭೀರ :
ಕಾರಿನಲ್ಲಿದ್ದ ಉಳಿದ ನಾಲ್ಕು ಜನ ಪ್ರಯಾಣಿಕರಿಗೂ ತೀವ್ರ ಸ್ವರೂಪದ ಗಾಯಗಳಾಗಿವೆ. ಅಪಘಾತದ ಶಬ್ದ ಕೇಳಿ ಧಾವಿಸಿದ ಸ್ಥಳೀಯರು ಮತ್ತು ಹೆದ್ದಾರಿ ಪೊಲೀಸರು ತಕ್ಷಣವೇ ರಕ್ಷಣಾ ಕಾರ್ಯ ಕೈಗೊಂಡು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದ್ದು, ಪರಿಸ್ಥಿತಿ ಇನ್ನಷ್ಟೇ ತಿಳಿಯಬೇಕಿದೆ.
ಘಟನಾ ಸ್ಥಳಕ್ಕೆ ಕೃಷ್ಣ ಮಂಡಲದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತಕ್ಕೆ ಚಾಲಕನ ನಿದ್ರಾವಸ್ಥೆ ಅಥವಾ ತಾಂತ್ರಿಕ ದೋಷವೋ ಎಂಬ ನಿಖರ ಕಾರಣಗಳ ಕುರಿತು ತನಿಖೆ ಮುಂದುವರಿಸಿದ್ದಾರೆ. ಶೇಖರಪ್ಪ ಗೌಡ ಅವರ ನಿಧನಕ್ಕೆ ರಾಯಚೂರಿನ ಶಿಕ್ಷಣ ವಲಯ ತೀವ್ರ ಕಂಬನಿ ಮಿಡಿದಿದೆ.