ರಾಯಚೂರು : ಬಡ ರೋಗಿಗಳಿಗೆ ಉಚಿತವಾಗಿ ವಿತರಿಸಬೇಕಾದ ಸರ್ಕಾರಿ ಔಷಧಿಗಳು ರಸ್ತೆ ಬದಿ ತಿಪ್ಪೆಗುಂಡಿಯಲ್ಲಿ ಪತ್ತೆಯಾದ ಘಟನೆ ನಗರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ನಗರದ ಎಲ್‌ಬಿಎಸ್ ನಗರದಲ್ಲಿರುವ ಸ್ಮಶಾನ ಜಾಗದ ಸಮೀಪ ರಾಶಿಗಟ್ಟಲೆ ಕೆಮ್ಮು, ಕಫ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಬಳಸುವ ಔಷಧಿಗಳನ್ನು ಬಿಸಾಡಿರುವುದು ಕಂಡುಬಂದಿದೆ. ಆಶ್ಚರ್ಯದ ಸಂಗತಿಯೇನೆಂದರೆ, ಪತ್ತೆಯಾದ ಬಹುತೇಕ ಔಷಧಿಗಳ ಅವಧಿ ಇನ್ನೂ ಮುಗಿದಿರಲಿಲ್ಲ.
ಇದಷ್ಟೇ ಅಲ್ಲದೆ, ಸರ್ಕಾರದ ಮುದ್ರೆ ಇರುವ ಸಿರಿಂಜ್‌ಗಳನ್ನೂ ದೊಡ್ಡ ಪ್ರಮಾಣದಲ್ಲಿ ತಿಪ್ಪೆಯಲ್ಲಿ ಎಸೆದಿರುವುದು ಜನರಲ್ಲಿ ಅನುಮಾನಕ್ಕೆ ಕಾರಣವಾಗಿದೆ. ಜನ ಸಂಚಾರ ಇರುವ ಪ್ರದೇಶದಲ್ಲೇ ಈ ರೀತಿಯಾಗಿ ಔಷಧಿಗಳನ್ನು ನಿರ್ಲಕ್ಷ್ಯವಾಗಿ ತ್ಯಜಿಸಿರುವುದು ಆರೋಗ್ಯ ಇಲಾಖೆಯ ಕಾರ್ಯಪದ್ಧತಿಯ ಮೇಲೆ ಪ್ರಶ್ನೆ ಎಬ್ಬಿಸಿದೆ.
ಬಡವರಿಗೆ ನೀಡಬೇಕಾದ ಔಷಧಿಗಳು ಇಲ್ಲಿ ತಿಪ್ಪೆಗೆ ಬಿದ್ದಿವೆ. ಇದನ್ನು ಮಕ್ಕಳು ತೆಗೆದುಕೊಂಡು ಕುಡಿದರೆ ಯಾರು ಹೊಣೆ? ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಿಂದಲೇ ಈ ಔಷಧಿಗಳು ಬಂದಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ತನಿಖೆ ನಡೆಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಆರೋಗ್ಯ ಭದ್ರತೆಯ ದೃಷ್ಟಿಯಿಂದ ಇಂತಹ ನಿರ್ಲಕ್ಷ್ಯ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಔಷಧಿ ಮತ್ತು ಸಿರಿಂಜ್‌ಗಳನ್ನು ಯಾರು, ಯಾವ ಉದ್ದೇಶದಿಂದ ಇಲ್ಲಿ ಬಿಸಾಡಿದ್ದಾರೆ ಎಂಬುದನ್ನು ಪತ್ತೆಹಚ್ಚಿ, ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.