LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಐಪಿಎಲ್ ಗೆಲುವಿನ ಸಂಭ್ರಮಾಚರಣೆ ಗಲಾಟೆ ಯುವಕನಿಗೆ ಮಾರಣಾಂತಿಕ ಹಲ್ಲೆ 

ರಾಯಚೂರಿನಲ್ಲಿ ತಡವಾಗಿ ಬೆಳಕಿಗೆ ಬಂದ ಘಟನೆ

ರಾಯಚೂರು : ಐಪಿಎಲ್ ಕ್ರಿಕೆಟ್ ಪಂದ್ಯದ ಗೆಲುವಿನ ಸಂಭ್ರಮಾಚರಣೆ ವೇಳೆ ಬೈಕ್‌ಗಳ ಕರ್ಕಶ ಶಬ್ದವನ್ನು ಪ್ರಶ್ನಿಸಿದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ನಗರದ ಲಕ್ಷ್ಮಮ್ಮದೇವಿ ದೇವಸ್ಥಾನದ ಬಳಿ ಸೋಮವಾರ ರಾತ್ರಿ ಸಂಭವಿಸಿದೆ. ‌ಈ ಘಟನೆಯು ಎರಡು ಗುಂಪುಗಳ ನಡುವೆ ಭೀಕರ ಘರ್ಷಣೆಗೆ ಕಾರಣವಾಗಿದ್ದು, ಸ್ಥಳದಲ್ಲಿ ತೀವ್ರ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಐಪಿಎಲ್ ಪಂದ್ಯದಲ್ಲಿ ನೆಚ್ಚಿನ ತಂಡ ಜಯಗಳಿಸಿದ ಖುಷಿಯಲ್ಲಿ ಯುವಕರ ದಂಡು ಬೈಕ್‌ಗಳಲ್ಲಿ ಬಂದು ಜೋರಾಗಿ ಹಾರ್ನ್ ಹಾಗೂ ಸೌಂಡ್ ಮಾಡುತ್ತಾ ಸಂಭ್ರಮಿಸುತ್ತಿತ್ತು. ಈ ವೇಳೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದನ್ನು ಗಮಿನಿಸಿ, ಸ್ಥಳೀಯ ಯುವಕನೊಬ್ಬ ಶಬ್ದ ಮಾಡದಂತೆ ಪ್ರಶ್ನಿಸಿದ್ದಾನೆ. ಇದರಿಂದ ಕೆರಳಿದ ಬೈಕ್ ಸವಾರರು ಮತ್ತು ಅವರ ಸ್ನೇಹಿತರು ಯುವಕನೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ, ಯುವಕನ ಮೇಲೆ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಲಾಗಿದೆ.

ಈ ಘರ್ಷಣೆಯಲ್ಲಿ ತೀವ್ರವಾಗಿ ಗಾಯಗೊಂಡ ಯುವಕನನ್ನು ತಕ್ಷಣವೇ ಸ್ಥಳೀಯ ರಿಮ್ಸ್ (RIMS) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಲಾಟೆಯ ವೇಳೆ ಇತರ ಮೂವರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ತನ್ನ ಸ್ನೇಹಿತನ ಮೇಲೆ ಹಲ್ಲೆಯಾಗಿದ್ದನ್ನು ಕಂಡು ಆಕ್ರೋಶಗೊಂಡ ಮತ್ತೊಂದು ಗುಂಪಿನ ಯುವಕರು ತಕ್ಷಣವೇ ಪ್ರತಿಧಾಳಿ ನಡೆಸಿದ್ದು, ಸ್ಥಳವು ರಣರಂಗವಾಗಿ ಮಾರ್ಪಟ್ಟಿತ್ತು.

ವಿಷಯ ತಿಳಿಯುತ್ತಿದ್ದಂತೆ ನೂರಾರು ಯುವಕರು ದೇವಸ್ಥಾನದ ಬಳಿ ಜಮಾಯಿಸಿದ್ದರಿಂದ ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಧಾವಿಸಿ ಸಮಯೋಚಿತ ಮಧ್ಯಸ್ಥಿಕೆಯಿಂದಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಗಲಾಟೆ ನಡೆದ ಸ್ಥಳದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಸಂಭ್ರಮಾಚರಣೆಯ ಹೆಸರಿನಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

 

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST