ರಾಯಚೂರು : ಜಿಲ್ಲಾಡಳಿತ ಭವನದಲ್ಲಿರುವ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಎಫ್‌ಡಿಎ ಮಹಾಬಲೇಶ್ವರ ಎಂಬ ಸಿಬ್ಬಂದಿಯನ್ನು ಲೋಕಾಯುಕ್ತ ಅಧಿಕಾರಿಗಳು ಗುರುವಾರ ಮಧ್ಯಾಹ್ನ ರೆಡ್ ಹ್ಯಾಂಡಾಗಿ ಹಿಡಿದು ಬಂಧಿಸಿದ್ದಾರೆ.
ಖಾಸಗಿ ಶಾಲೆಯೊಂದರ ಅನುಮತಿ ನವೀಕರಣಕ್ಕಾಗಿ 40 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಶಾಲಾ ಆಡಳಿತ ಮಂಡಳಿಯಿಂದ ಈಗಾಗಲೇ 25 ಸಾವಿರ ರೂ. ಪಡೆಯಲಾಗಿತ್ತು. ಉಳಿದ 15 ಸಾವಿರ ರೂ. ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಸಿದ್ದಣ್ಣ ರಾಂಪೂರ ಅವರು ನೀಡಿದ ದೂರಿನ ಆಧಾರದ ಮೇಲೆ ದಾಳಿ ನಡೆಸಲಾಗಿದ್ದು, ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ಮುಂದುವರಿದಿದೆ. ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ ಕಾರ್ಯಾಚರಣೆಯಿಂದ ಕಚೇರಿ ಸಿಬ್ಬಂದಿಯಲ್ಲಿ ಆತಂಕ ಮೂಡಿದೆ.