LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗೆ ಎಲ್ಲರೂ ಮತ್ತೆ ಅರ್ಜಿ ಸಲ್ಲಿಕೆ ಕಡ್ಡಾಯ..!

ಗ್ಯಾರಂಟಿ ಕಳ್ಳಾಟಕ್ಕೆ ಬ್ರೇಕ್ ಹಾಕಲು ಮುಂದಾದ‌ ಸಿಎಂ

 

 

ರಾಜ್ಯದ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ದುರುಪಯೋಗ ಹಾಗೂ ಕಳ್ಳಾಟಕ್ಕೆ ಮುಕ್ತಿ ಹಾಡಲು ಸರ್ಕಾರ ಈಗ ಮಾಸ್ಟರ್‌ ಪ್ಲಾನ್‌ ರೂಪಿಸಿದೆ. ಇನ್ನು ಮುಂದೆ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಗ್ಯಾರಂಟಿ ಯೋಜನೆಗಳ ಲಾಭವನ್ನು ಪಡೆಯಬೇಕಾದರೆ ಪ್ರಸ್ತುತ ಫಲಾನುಭವಿಗಳು ಹೊಸದಾಗಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ.

ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಕುರಿತು ಖಡಕ್ ಸೂಚನೆ ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಮರು ಅರ್ಜಿ ಸಲ್ಲಿಕೆ ಕಡ್ಡಾಯಗೊಳಿಸುತ್ತಿರುವ ಹಿನ್ನೆಲೆಯಲ್ಲಿ, ಪ್ರಮುಖವಾಗಿ ಗೃಹಲಕ್ಷ್ಮೀ ಯೋಜನೆಗೆ ಹೊಸ ಅರ್ಜಿ ಸಲ್ಲಿಕೆಯ ಪ್ರತಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ.

ಸದ್ಯ ಸಿದ್ಧಪಡಿಸಲಾಗಿರುವ ಈ ಹೊಸ ಅರ್ಜಿಯ ಪ್ರತಿಯನ್ನು ಹಣಕಾಸು ಇಲಾಖೆ ಮತ್ತು ಇ-ಗೌರ್ನೆನ್ಸ್‌ ಇಲಾಖೆಗೆ ರವಾನಿಸಲಾಗಿದೆ. ಮುಖ್ಯಮಂತ್ರಿಗಳು ಈ ಅರ್ಜಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಹಸಿರು ನಿಶಾನೆ ನೀಡಿದ ಬಳಿಕ ಸಾರ್ವಜನಿಕರಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅಧಿಕೃತವಾಗಿ ಅವಕಾಶ ಕಲ್ಪಿಸಲಾಗುವುದು. 

ಅರ್ಜಿಯಲ್ಲಿ ಯಾವೆಲ್ಲ ಕಟ್ಟುನಿಟ್ಟಿನ ಪ್ರಶ್ನೆಗಳನ್ನು ಸೇರಿಸಬೇಕು ಎಂಬುದನ್ನು ಮುಖ್ಯಮಂತ್ರಿಗಳೇ ಅಂತಿಮವಾಗಿ ನಿರ್ಧಾರ ಮಾಡಲಿದ್ದಾರೆ. ಮೂಲಗಳ ಪ್ರಕಾರ, 2023ರ ಗೃಹಲಕ್ಷ್ಮಿ ಯೋಜನೆ ಅರ್ಜಿಯನ್ನೇ ಸರ್ಕಾರಕ್ಕೆ ಪ್ರಸ್ತಾವನೆ ರೂಪದಲ್ಲಿ ಸಲ್ಲಿಸಲಾಗಿದ್ದು, ಹಳೆಯ ಪ್ರಶ್ನೆಗಳ ಜೊತೆಗೆ ಈ ಬಾರಿ ಕೆಲವು ಹೊಸ ಹಾಗೂ ತೀಕ್ಷ್ಣವಾದ ಪ್ರಶ್ನೆಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ.

ಹೊಸ ಅರ್ಜಿಯಲ್ಲಿ ಏನೆಲ್ಲಾ ವಿವರ ಇರಲಿದೆ..?

ಅನರ್ಹರನ್ನು ಪಟ್ಟಿಯಿಂದ ಹೊರದಬ್ಬಲು ಸಿದ್ಧಪಡಿಸಲಾಗುತ್ತಿರುವ ಹೊಸ ಅರ್ಜಿಯಲ್ಲಿ ಫಲಾನುಭವಿಗಳು ಈ ಕೆಳಗಿನ ಪ್ರಮುಖ ವಿವರಗಳನ್ನು ನೀಡಬೇಕಾಗುತ್ತದೆ:

 * ಮನೆಯ ಯಜಮಾನಿ ಯಾರು ಮತ್ತು ಅವರ ಆಧಾರ್ ಸಂಖ್ಯೆ?

 * ಮನೆಯ ಯಜಮಾನಿಯ ಬ್ಯಾಂಕ್ ಖಾತೆಯ ಸಂಪೂರ್ಣ ವಿವರ.

 * ಈ ಹಿಂದೆ ಮನೆಯಲ್ಲಿ ಎಷ್ಟು ಸದಸ್ಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಬರುತ್ತಿತ್ತು.?

 * ಫಲಾನುಭವಿಯ ಜಾತಿ ಯಾವುದು ಹಾಗೂ ಮಹಿಳೆಯ ಪತಿಯ ಹೆಸರು ಮತ್ತು ಅವರ ಆಧಾರ್ ಸಂಖ್ಯೆ.?

 * ಕಡ್ಡಾಯವಾಗಿ ಆಧಾರ್ ಕಾರ್ಡ್ ದಾಖಲಾತಿಗಳ ಸಲ್ಲಿಕೆ.

 * ನೀವು ಆದಾಯ ತೆರಿಗೆ (IT) ಮತ್ತು ಜಿಎಸ್‌ಟಿ (GST) ಪಾವತಿದಾರರೇ.?

 * ನಿಮ್ಮ ಕುಟುಂಬದ ಬಳಿ ಇರುವುದು ಎಪಿಎಲ್ ಕಾರ್ಡ್ ಅಥವಾ ಬಿಪಿಎಲ್ ಕಾರ್ಡ್?

ಈ ಎಲ್ಲಾ ಕಠಿಣ ಪ್ರಶ್ನೆಗಳಿಗೆ ಅರ್ಜಿದಾರರು ಕಡ್ಡಾಯವಾಗಿ ಉತ್ತರಿಸಬೇಕಿದೆ. ಹಳೆಯ ಅರ್ಜಿಯನ್ನೇ ಹಣಕಾಸು ಇಲಾಖೆಗೆ ಸಲ್ಲಿಕೆ ಮಾಡಲಾಗಿದ್ದು, ಇಲಾಖೆಯು ದುರುಪಯೋಗ ತಡೆಯಲು ಇದರಲ್ಲಿ ಮತ್ತಷ್ಟು ಪ್ರಶ್ನೆಗಳನ್ನು ಸೇರಿಸುವ ಸಾಧ್ಯತೆಯಿದೆ. 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೂತನ ಸಚಿವರು ಅಧಿಕಾರ ವಹಿಸಿಕೊಂಡ ಬಳಿಕ ಈ ಹೊಸ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಅಧಿಕೃತ ಚಾಲನೆ ಸಿಗಲಿದೆ. ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ಪೂರ್ಣಗೊಂಡ ತಕ್ಷಣವೇ ಸಾರ್ವಜನಿಕರಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST