ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮ್ಯಾದರಗೋಳದಲ್ಲಿ ಜಮೀನು ವಿವಾದ ಹಿನ್ನೆಲೆ ದಾಯಾದಿಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಮಂಗಳವಾರ ನಡೆದಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ಜಮೀನು ಉಳುಮೆ ಮಾಡುತ್ತಿದ್ದ ಶಿವಣ್ಣ, ಬಸನಗೌಡ ಎಂಬುವವರ ಸ್ಥಿತಿ ಗಂಭೀರವಾಗಿದೆ.
ರಾಯಚೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಕಣ್ಣಿಗೆ ಖಾರದ ಪುಡಿ ಎರಚಿ ಮಚ್ಚು ,ಕಲ್ಲು, ದೊಣ್ಣೆಯಿಂದ ಹಲ್ಲೆ ಮಾಡಲಾಗಿದೆ. ಭೀಮರಾಯ, ರಂಗಪ್ಪ, ನಾಗರಾಜ, ಹನುಮಗೌಡ ಸೇರಿ 10 ಕ್ಕೂ ಹೆಚ್ಚು ಜನರಿಂದ ಹಲ್ಲೆ ನಡೆದಿದೆ ಅಂತ ಗಾಯಾಳುಗಳ ಕುಟುಂಬಸ್ಥರು ಆರೋಪಿಸಿದ್ದಾರೆ.
ಒಟ್ಟು 6 ಎಕರೆ ಜಮೀನಿಗಾಗಿ ದಾಯಾದಿಗಳು ನ್ಯಾಯಾಲಯ ಮೆಟ್ಟಿಲೇರಿದ್ದರು. ನ್ಯಾಯಾಲಯದಲ್ಲಿ ಆಸ್ತಿಯ ಪ್ರಕರಣ ಮುಕ್ತಯವಾಗಿದ್ದರು ಜಮೀನಿಗಾಗಿ ಹಲ್ಲೆ ನಡೆದಿದೆ. ಈ ಹಿಂದೆ ಹೊಲದ ಬೆಳೆಯನ್ನ ಹಾಳು ಮಾಡಿ ನಷ್ಟ ಉಂಟು ಮಾಡಿದ್ದರು, ಈಗ ಹಲ್ಲೆ ಮಾಡಿದ್ದಾರೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಅಂತ ಗಾಯಾಳುಗಳ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಹಲ್ಲೆ ಹಿನ್ನೆಲೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.