ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಯದ್ದಲದೊಡ್ಡಿ ಗ್ರಾಮದ ಬಳಿ ಖಾಸಗಿ ಶಾಲಾ ಬಸ್ ಬ್ರೇಕ್ ಫೇಲ್ ಆಗಿ ರಸ್ತೆ ಪಕ್ಕದ ಹೊಲಕ್ಕೆ ಉರುಳಿ ಬಿದ್ದ ಘಟನೆ ಶುಕ್ರವಾರ ಸಂಜೆ ಸುಮಾರು 5.20ಕ್ಕೆ ಸಂಭವಿಸಿದೆ. ಶಾಲೆ ಬಿಟ್ಟ ಬಳಿಕ ಮಕ್ಕಳನ್ನು ಮನೆಗೆ ಬಿಡಲು ತೆರಳುತ್ತಿದ್ದ ವೇಳೆ ದುರ್ಘಟನೆ ನಡೆದಿದೆ.
ಬಸ್ಸಿನಲ್ಲಿ ಇದ್ದ 15 ಶಾಲಾ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳದಲ್ಲಿದ್ದ ಗ್ರಾಮಸ್ಥರು ತಕ್ಷಣ ಧಾವಿಸಿ ಗಾಯಗೊಂಡ ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಿದರು. ನಂತರ ಟ್ರ್ಯಾಕ್ಟರ್ ಸಹಾಯದಿಂದ ಉರುಳಿ ಬಿದ್ದ ಬಸ್ಸನ್ನು ಮೇಲಕ್ಕೆತ್ತಲಾಯಿತು. ತೀರಾ ಹಳೆಯದಾದ ಬಸ್ ಇದಾಗಿದ್ದು, ಬ್ರೇಕ್ ಜಾಮ್ ಆಗಿ ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸಾರಿಗೆ ನಿಯಮಗಳನ್ನು ಗಾಳಿಗೆ ತೂರಿ ಹಳೆಯ ವಾಹನಗಳನ್ನು ಸಂಚರಿಸಲು ಬಿಡಲಾಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಸಂಬಂಧಿಸಿದ ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಘಟನೆ ಸಿಂಧನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.