This is the title of the web page
This is the title of the web page
State News

ಅಕ್ಕಿ ಬದಲು ಹಣ ನೀಡುವುದರಿಂದ ಸರ್ಕಾರಕ್ಕೆ ಉಳಿತಾಯ ಎಷ್ಟಾಗುತ್ತೆ ?


K2 ನ್ಯೂಸ್ ಡೆಸ್ಕ್ : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಐದು ಗ್ಯಾರಂಟಿ ಜೊತೆ ವಿವಿಧ ಭರವಸೆಗಳನ್ನ ಪ್ರಣಾಳಿಕೆಯಲ್ಲಿ ನೀಡಿತ್ತು. ಅದರಲ್ಲಿ ಮುಖ್ಯವಾಗಿ ಪಡಿತರ ಚೀಟಿ ಹೊಂದಿದವರಿಗೆ 10 ಕೆಜಿ ಅಕ್ಕಿ ನೀಡುವುದು ಒಂದು ಆಗಿದೆ. ಸಾಕಷ್ಟು ಕಸರತ್ತಿನ ನಂತರ ಇದೀಗ ಸರ್ಕಾರ ಪಡಿತರದಾರರ ಖಾತೆಗೆ 5 ಕೆಜಿ ಅಕ್ಕಿಯ ಹಣ ಸಂದಾಯ ಮಾಡುವ ನಿರ್ಧಾರಕ್ಕೆ ಬಂದಿದೆ. ಇದರಿಂದ ಸರ್ಕಾರಕ್ಕೆ ಎಷ್ಟು ಉಳಿತಾಯವಾಗಲಿದೆ ಗೊತ್ತಾ.?

ಅಕ್ಕಿ ರಫ್ತು ಮಾಡಿಕೊಂಡರೆ ಅದಕ್ಕೆ, ಸಾಗಣೆ ವೆಚ್ಚ, ಸಗಟು ಮತ್ತು ಚಿಲ್ಲರೆ ಕಮೀಷನ್ ಕೊಡಬೇಕಾಗಿತ್ತು. ಸಾಗಣೆ ವೆಚ್ಚ ಪ್ರತಿ ಕೆಜಿಗೆ 1.10 ರೂ., ಸಗಟು ಕಮೀಷನ್ 35 ಪೈಸೆ ಹಾಗೂ ಚಿಲ್ಲರೆ ಕಮೀಷನ್ 1.84 ರೂ. ನೀಡಲಾಗುತ್ತಿತ್ತು. ಅಂದರೆ ಒಟ್ಟಾರೆ 2.69 ಪೈಸೆ ಈಗ ಸರ್ಕಾರಕ್ಕೆ ಉಳಿತಾಯವಾಗುತ್ತದೆ. ರಾಜ್ಯದಲ್ಲಿ 1.14 ಕೋಟಿ ಪಡಿತರ ಚೀಟಿಗಳಿದ್ದು, ಇವುಗಳಿಂದ ಒಟ್ಟಾರೆ 4.30 ಕೋಟಿ ಫಲಾನುಭವಿಗಳಿದ್ದಾರೆ ಎಂಬ ಅಂದಾಜು ಇದೆ. ಇಷ್ಟು ಜನರಿಗೂ ಸರ್ಕಾರ ತಲಾ 5 ಕೆಜಿಯಂತೆ ಅಕ್ಕಿ ವಿತರಣೆ ಮಾಡಲು ಮಾಸಿಕ 2.28 ಲಕ್ಷ ಮೆಟ್ರಿಕ್ ಟನ್ ಬೇಕಾಗುತ್ತಿತ್ತು. ಅಕ್ಕಿ ಕೊಡಲು ಸಾಧ್ಯವಿಲ್ಲದ ಕಾರಣ ಪ್ರತಿ ವ್ಯಕ್ತಿಗೆ 170 ರೂ. ನೀಡಲು ನಿರ್ಧರಿಸಲಾಗಿದೆ. ಸಾಗಣೆ ವೆಚ್ಚ, ಕಮೀಷನ್ ಎಲ್ಲ ಲೆಕ್ಕ ಹಾಕಿದರೆ ಮಾಸಿಕ 61.33 ಕೋಟಿ ರೂ. ಸರ್ಕಾರಕ್ಕೆ ಉಳಿತಾಯವಾಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹಿರಿಯ ಅಧಿಕಾರಿಗಳು ವಿವರಿಸಿದ್ದಾರೆ. ಸರ್ಕಾರ ಈಗ ಪ್ರತಿ ಫಲಾನುಭವಿಗೆ ಹಣ ನೀಡಲು ನಿರ್ಧರಿಸಿರುವುದರಿಂದ 4.30 ಕೋಟಿ ಫಲಾನುಭವಿಗಳಿಂದ ಮಾಸಿಕ 731 ಕೋಟಿ ರೂ. ಸರ್ಕಾರಕ್ಕೆ ವೆಚ್ಚವಾಗಲಿವೆ. ಅಕ್ಕಿ ಸಿಕ್ಕಿದ್ದರೆ ಈ ಮೊತ್ತ 800 ಕೋಟಿ ರೂ. ಗಳಾಗುತ್ತಿತ್ತು.

ಆಹಾರ ಇಲಾಖೆ ಅಧಿಕಾರಿಗಳಿಗೆ ಲಭ್ಯವಿರುವ ಮಾಹಿತಿ ಪ್ರಕಾರ ಪಂಜಾಬ್, ತೆಲಂಗಾಣ, ಆಂಧ್ರಪ್ರದೇಶ, ಛತ್ತೀಸ್​ಗಢ ಸೇರಿ ಯಾವುದೇ ರಾಜ್ಯದಿಂದ ಅಗತ್ಯವಿರುವಷ್ಟು ಅಕ್ಕಿ ಇನ್ನೂ ನಾಲ್ಕು ತಿಂಗಳು ಸಿಗುವುದಿಲ್ಲ. ಕೊಯ್ಲು ಮುಗಿದು ಬೆಳೆ ಕೈಗೆ ಸಿಗಬೇಕಾದರೆ ನವೆಂಬರ್ ಆಗಲಿದೆ. ಅಲ್ಲಿಯ ತನಕ ಸರ್ಕಾರ ಫಲಾನುಭವಿಗಳ ಖಾತೆಗೆ ಹಣ ಹಾಕಬೇಕಾಗುತ್ತದೆ. ನಾಲ್ಕು ತಿಂಗಳಿನಲ್ಲಿ ಸರ್ಕಾರಕ್ಕೆ ಉಳಿತಾಯವಾಗುವ ಮೊತ್ತ ಸುಮಾರು 250 ಕೋಟಿ ರೂ. ಗಳೆಂದು ಅಂದಾಜು ಮಾಡಲಾಗಿದೆ.

ಪಡಿತರ ಚೀಟಿದಾರರ ಕುಟುಂಬದ ಯಜಮಾನನ ಖಾತೆಗೆ ಸರ್ಕಾರ ನೇರ ನಗದು ವರ್ಗಾವಣೆ ಮಾಡಲಿದೆ. ಆದರೆ, ಆಹಾರ ಇಲಾಖೆ ಡಾಟಾ ಬೇಸ್​ನಲ್ಲಿ ಪಡಿತರ ಚೀಟಿದಾರರ ಬ್ಯಾಂಕ್ ಖಾತೆ ವಿವರ ಇಲ್ಲ. ಸರ್ಕಾರದಿಂದ ಸೂಚನೆ ಬಂದ ಕೂಡಲೇ ಪಡಿತರ ಅಂಗಡಿಗಳ ಮೂಲಕ ಬ್ಯಾಂಕ್ ಖಾತೆಯ ವಿವರ ಸಂಗ್ರಹ ಮಾಡಲಾಗುತ್ತದೆ. ಅದು ಆದಷ್ಟು ಬೇಗ ಮುಗಿಯುವ ಪ್ರಕ್ರಿಯೆ ಆಗಿದೆ.

ಪಡಿತರ ಚೀಟಿದಾರರ ಖಾತೆಗೆ ಹಣ ಹಾಕುವ ಸರ್ಕಾರದ ನಿರ್ಧಾರ ಪಡಿತರ ವಿತರಕರಿಗೆ ಕಣ್ಣು ಕೆಂಪಗಾಗಿಸಿದೆ. ಚಿಲ್ಲರೆ ಕಮೀಷನ್ ಕೈ ತಪ್ಪಿ ಹೋಗುವ ಆತಂಕ ಎದುರಾಗಿದೆ. ಆದ್ದರಿಂದ ಪಡಿತರ ವಿತರಕರು ನಮಗೂ ಕಮೀಷನ್ ಕೊಡಿ ಎಂಬ ಬೇಡಿಕೆ ಇಟ್ಟಿದ್ದಾರೆ. ಆದರೆ, ಸರ್ಕಾರ ಆ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಸರ್ಕಾರ ಪಡಿತರ ಚೀಟಿದಾರರಿಗೆ ಹಣ ಹಾಕುವ ನಿರ್ಧಾರದಿಂದ ಜನರ ಕೈಯಲ್ಲಿ ಹಣ ಹರಿದಾಡಲಿದೆ. ಇದರಿಂದ ಖರೀದಿಯ ಸಾಮರ್ಥ್ಯ ಹೆಚ್ಚಾಗುತ್ತದೆ. ಆರ್ಥಿಕ ಚಟುವಟಿಕೆಗಳು ಜಾಸ್ತಿಯಾಗುತ್ತವೆ. ಇದರಿಂದ ಸರ್ಕಾರಕ್ಕೂ ತೆರಿಗೆ ರೂಪದಲ್ಲಿ ಹಣ ಹಿಂದಕ್ಕೆ ಬರಲಿದೆ ಎಂದೇ ನಿರೀಕ್ಷೆ ಮಾಡಲಾಗುತ್ತಿದೆ ಎಂದು ಮೂಲಗಳು ಹೇಳುತ್ತವೆ.

ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚಿನ ದರಕ್ಕೆ ಅಕ್ಕಿ ಖರೀದಿಸಿ ಅದರಲ್ಲಿ ಕಮೀಷನ್ ಪಡೆಯಲು ಕೆಲವರು ಸಂಚು ರೂಪಿಸಿದ್ದರೆಂಬ ಸುದ್ದಿ ವಿಧಾನಸೌಧದ ಮೂರನೇ ಮಹಡಿಯಲ್ಲಿ ಹರಿದಾಡುತ್ತಿದೆ. ಮುಖ್ಯಮಂತ್ರಿ ಅವರಿಗೆ ಈ ಮಾಹಿತಿ ಸಿಕ್ಕ ಕೂಡಲೇ ಕೇಂದ್ರ ಸರ್ಕಾರದ ದರದಲ್ಲಿ ಅಕ್ಕಿ ಸಿಗುವ ತನಕ ಹಣ ನೀಡುವ ಮಹತ್ವದ ನಿರ್ಧಾರ ಕೈಗೊಂಡರೆಂದು ಹೇಳಲಾಗುತ್ತಿದೆ.


[ays_poll id=3]