This is the title of the web page
This is the title of the web page
Politics News

ಮತ್ತೆ ನಾವೇ ಅಧಿಕಾರಕ್ಕೆ ಬಂದು ಬಜೆಟ್ ಅನುಷ್ಠಾನ ಮಾಡುತ್ತೇವೆ : ಸಿಎಂ


K2 ಪೊಲಿಟಿಕಲ್ ನ್ಯೂಸ್ : ಕಳೆದ ಬಾರಿಯ ಬಜೆಟ್ ಅನ್ನು ಶೇ.90 ರಷ್ಟು ಅನುಷ್ಠಾನ ಮಾಡಿದ್ದು, ಈ ಬಾರಿಯ ಬಜೆಟ್ ಅನ್ನೂ ಮುಂದೆ ನಾವೇ ಅಧಿಕಾರಕ್ಕೆ ಬಂದು ಅನುಷ್ಠಾನಕ್ಕೆ ತರುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಇಂದು ವಿಧಾನ ಪರಿಷತ್ ನಲ್ಲಿ ಬಜೆಟ್ ಮೇಲಿನ ಸದಸ್ಯರ ಪ್ರಶ್ನೆಗಳಿಗೆ ಸುದೀರ್ಘವಾಗಿ ಉತ್ತರಿಸುತ್ತಾ ರಾಜ್ಯ ಮುಂಗಡ ಬಜೆಟ್ ಅನ್ನು ಸಮರ್ಥಿಸಿಕೊಂಡು ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದರು. ಬಜೆಟ್ ಮೇಲೆ 14 ಜನ ಮಾತನಾಡಿದ್ದಾರೆ‌, ಹಲವಾರು ವಿಚಾರ ಹೇಳಿದ್ದಾರೆ. ಕೆಲವು ಅನುಷ್ಠಾನದ ಬಗ್ಗೆ, ಸಲಹೆ ಸೂಚನೆ ಕೊಟ್ಟಿದ್ದನ್ನು ಸ್ವಾಗತ ಮಾಡುತ್ತೇನೆ. ರಾಜ್ಯದ ಒಟ್ಟಾರೆ ಹಣಕಾಸು ಸ್ಥಿತಿ, ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಕಾರ್ಯಕ್ರಮಗಳು, ವರ್ಷದ ಮುನ್ನೋಟದ ಅಂದಾಜು ಆದಾಯ, ವೆಚ್ಚ, ಅಭಿವೃದ್ಧಿಗೆ ಎಷ್ಟು ವೆಚ್ಚ ಮಾಡಬಹುದು ಎನ್ನುವ ಎಲ್ಲ ವಿಚಾರ ಬಜೆಟ್ ನಲ್ಲಿ ಮಂಡಿಸಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಅಗತ್ಯಕ್ಕೆ ತಕ್ಕಂತೆ ಬಜೆಟ್ ಮಾರ್ಪಾಡು : ಆರು ವಲಯದಲ್ಲಿ ಬಜೆಟ್ ವಿಂಗಡಣೆ ಮಾಡಿದ್ದೇವೆ.‌ ರಾಜ್ಯದ ಆರ್ಥಿಕತೆಗೆ ಚೌಕಟ್ಟು ಹಾಕಿಕೊಳ್ಳಬೇಕು. ಆರ್ಥಿಕ ಶಿಸ್ತು ಇರಲು ಕಾನೂನು ರಚಿಸಲಾಗಿದೆ. ಆರ್ಥಿಕತೆಯಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಅದಕ್ಕೆ ತಕ್ಕಂತೆ ನಾವು ಬಜೆಟ್ ಮಾರ್ಪಾಡು ಮಾಡಿದ್ದೇವೆ. ಸಾಮಾಜಿಕ ಮೂಲಸೌಕರ್ಯ ವೆಚ್ಚ ಹೆಚ್ಚಾದರೆ ಆರ್ಥಿಕ ವೃದ್ಧಿಗೂ ವೆಚ್ಚ ಹೆಚ್ಚಳ ಆಗಲಿದ್ದು, ಎರಡನ್ನೂ ಹೊಂದಿಸುವುದು ಸವಾಲಾಗಿದೆ‌ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಕೋವಿಡ್ ನಿಂದಾಗಿ ಸಾಲ ಮಾಡಬೇಕಾಯಿತು: ಕೋವಿಡ್ ಸಮಯದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮಾಡಿಕೊಟ್ಟ ಅನುಕೂಲದ ಜೊತೆ ಸಮುದಾಯಗಳಿಗೆ ಕೇಂದ್ರ, ರಾಜ್ಯ ಸರ್ಕಾರ ನೆರವು ನೀಡಿತು. ಇದಕ್ಕಾಗಿ ನಾವು ಸಾಲ ಮಾಡಲೇಬೇಕಾಯಿತು. ಕೋವಿಡ್ ವೇಳೆ ಒಂದು ವರ್ಷದಲ್ಲಿ ನಮಗೆ ಬರಬೇಕಿದ್ದ ಜಿಎಸ್ಟಿ ಪರಿಹಾರ 30 ಸಾವಿರ ಕೋಟಿ ನಮ್ಮ ಹೆಸರಿನಲ್ಲಿ ಕೇಂದ್ರ ಸಾಲ ತೆಗೆದು ನಮಗೆ ಕೊಟ್ಟರು. ಆ ಸಾಲವನ್ನು ಕೇಂದ್ರವೇ ತೀರಿಸಲಿದೆ. ಒಂದೇ ವರ್ಷದಲ್ಲಿ 20 ಸಾವಿರ ಕೋಟಿ ನಮಗೆ ಬರಬೇಕಾದ ಆದಾಯ ಕಡಿತವಾಯಿತು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

ನಮ್ಮದು ಉಳಿತಾಯದ ಆರ್ಥಿಕತೆ: ಕೋವಿಡ್ ಲಾಕ್ ಡೌನ್ ನಲ್ಲಿ ಕೆಲಸಕ್ಕೆ ಪರದಾಡಿ ಗುಳೆ ಹೋಗುವ ಸ್ಥಿತಿ ಬಂದಿತ್ತು. ಸ್ವಾತಂತ್ರ್ಯ ನಂತರ ಮೊದಲ ಬಾರಿ ಇಂತಹ ಸ್ಥಿತಿ ಎದುರಾಯಿತು. ಹಲವಾರು ದೇಶದಲ್ಲಿ ಇನ್ನೂ ಆರ್ಥಿಕ ಚೇತರಿಕೆ ಕಾಣದೇ, ಬೆಲೆ ಏರಿಕೆ ಆರ್ಥಿಕ ಕುಸಿತ ಎದುರಿಸುತ್ತಿವೆ. ಆದರೆ ಭಾರತ ಆರ್ಥಿಕ ಕುಸಿತದಿಂದ ಚೇತರಿಸಿಕೊಂಡಿದೆ. ಇದು ದೇಶದ ಅಂತರ್ಗತ ಶಕ್ತಿ. ಜತೆಗೆ ನಮ್ಮ ಸಂಸ್ಕೃತಿಯೂ ಕಾರಣ. ನಮ್ಮದು ಉಳಿತಾಯದ ಆರ್ಥಿಕತೆ. ನಾವು ಸಾವಿರ ಗಳಿಸಿದರೆ ನೂರು ರೂ ಉಳಿಸುವ ಆರ್ಥಿಕತೆ ಬೆಳೆಸಿಕೊಂಡಿದ್ದೇವೆ. ಬೇರೆ ದೇಶದ್ದು ವೆಚ್ಚದ ಆರ್ಥಿಕತೆ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.

ಹಿಂದಿನ ಸರ್ಕಾರ 88.3% ಸಾಲ ಮಾಡಿದ್ದರು : ನಾಲ್ಕು ವರ್ಷದಲ್ಲಿ ನಮಗೆ ಸಾಲ ಮಾಡಲು ಲಭ್ಯವಿದ್ದ ಪ್ರಮಾಣದಲ್ಲಿ ಶೇ.71 ರಷ್ಟು ಮಾತ್ರ ಸಾಲ ಮಾಡಿದ್ದೇವೆ. ಪ್ರತಿ ವರ್ಷ ಸಾಲ ಮಾಡುವ ಮಿತಿ ಕಡಿಮೆ ಮಾಡುತ್ತಿದ್ದೇವೆ. ನಮ್ಮ ಹಿಂದಿದ್ದವರು 88.3% ಸಾಲ ಮಾಡಿದ್ದರು. ನೆರೆ ರಾಜ್ಯಕ್ಕೆ ಹೋಲಿಸಿದರೆ ನಾವೇ ಕಡಿಮೆ ಸಾಲ ಮಾಡಿದ್ದೇವೆ. ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕಡಿಮೆ ಎನ್ನುವ ಆರೋಪ ಮಾಡಿದ್ದಾರೆ. ಆದರೆ ನಮ್ಮ ಅಭಿವೃದ್ಧಿ ಕಾರ್ಯಕ್ಕೆ ಪ್ರತಿ ವರ್ಷ ಅನುದಾನ ಹೆಚ್ಚಿಸುತ್ತಾ ಬಂದಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.


[ays_poll id=3]