ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಬಸ್ ನಿಲ್ದಾಣದ ಬಳಿ ಮಹಿಳೆಯೊಬ್ಬರ ಬ್ಯಾಗ್‌ನಿಂದ 1.6 ಲಕ್ಷ ರೂ. ಹಣ ಕದ್ದು ಮಹಿಳೆಯೊಬ್ಬಳು ಪರಾರಿಯಾಗಿರುವ ಘಟನೆ ನಡೆದಿದೆ. ಪಟ್ಟಣದ ಕೋನಾಪುರಪೇಟೆಯ ಅಮರಮ್ಮ ಎಂಬುವವರು ಬ್ಯಾಂಕ್‌ನಿಂದ ಹಣ ಪಡೆದು ಮನೆಗೆ ತೆರಳುತ್ತಿದ್ದ ವೇಳೆ ಈ ಕೃತ್ಯ ನಡೆದಿದೆ. ಬ್ಯಾಂಕ್‌ನಿಂದಲೇ ಹಿಂಬಾಲಿಸಿಕೊಂಡು ಬಂದಿದ್ದ ಕಳ್ಳ ಮಹಿಳೆ, ಕಿರಾಣಿ ಅಂಗಡಿ ಮುಂದೆ ಗ್ರಾಹಕರ ಸೋಗಿನಲ್ಲಿ ನಿಂತು ಅವಕಾಶಕ್ಕಾಗಿ ಕಾಯುತ್ತಿದ್ದಳು.
ಅಮರಮ್ಮ ಅವರು ಅಂಗಡಿ ಬಳಿ ನಿಂತಿದ್ದ ವೇಳೆ, ಅವರ ಗಮನ ಬೇರೆಡೆ ಸೆಳೆದು ಬಾಲಕನೊಬ್ಬನನ್ನು ಅಡ್ಡ ನಿಲ್ಲಿಸಿ ಕೈಚಳಕ ತೋರಿಸಿದ್ದಾಳೆ. ಬಳಿಕ ಬ್ಯಾಗ್‌ನ ಜಿಪ್ ತೆರೆದು ಅದರಲ್ಲಿದ್ದ ಹಣವನ್ನು ತನ್ನ ಚೀಲಕ್ಕೆ ಹಾಕಿಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾಳೆ. ಕೆಲವೇ ಕ್ಷಣಗಳಲ್ಲಿ ನಡೆದ ಈ ಕಳ್ಳತನದಿಂದ ಮಹಿಳೆ ಬೆಚ್ಚಿಬಿದ್ದಿದ್ದಾರೆ.
ಘಟನೆಯ ಸಂಪೂರ್ಣ ದೃಶ್ಯ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಸಿ ಟಿವಿ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಆರೋಪಿಯ ಪತ್ತೆಗೆ ಮುಂದಾಗಿದ್ದಾರೆ. ಬ್ಯಾಂಕ್‌ನಿಂದಲೇ ಹಣ ತೆಗೆದುಕೊಂಡು ಬರುತ್ತಿರುವವರನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಅಮರಮ್ಮ ಅವರು ಮಾನ್ವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.