ರಾಯಚೂರು: ವಿಶೇಷ ತೀವ್ರ ಪರಿಶೀಲನೆ (ಎಸ್‌ಐಆರ್) ಪ್ರಕ್ರಿಯೆ ಸಂಪೂರ್ಣವಾಗಿ ಕೇಂದ್ರ ಚುನಾವಣಾ ಆಯೋಗದ ವ್ಯಾಪ್ತಿಯಲ್ಲಿದ್ದು, ರಾಜ್ಯ ಸರ್ಕಾರದ ಪಾತ್ರ ಕೇವಲ ಸಹಕಾರ ನೀಡುವುದಷ್ಟೇ, SIR ಪ್ರಕ್ರಿಯೆ ನಮಗೆ ಖುಷಿ ಇಲ್ಲ, ಹಾಗಂತ ವಿರೋಧಿಸುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದರು.
https://youtube.com/shorts/_697tKgh0y0?si=y72MfxeztMUeASVP
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆಯಿಂದ ಯಾರೂ ವಿಶೇಷವಾಗಿ ಸಂತೋಷವಾಗಿಲ್ಲ. ಆದರೆ ಅದನ್ನು ವಿರೋಧಿಸುವ ಪ್ರಶ್ನೆಯೂ ಇಲ್ಲ. ಚುನಾವಣಾ ಆಯೋಗದ ನಿರ್ದೇಶನದಂತೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಅಗತ್ಯವಾಗಿದ್ದು, ಜನರಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತಿದೆ ಎಂದು ಹೇಳಿದರು.
ಈ ಪ್ರಕ್ರಿಯೆಗೆ ಸಿಬ್ಬಂದಿಯನ್ನು ನಿಯೋಜಿಸಿರುವುದು ಚುನಾವಣಾ ಆಯೋಗವೇ ಹೊರತು ಸರ್ಕಾರವಲ್ಲ. ಸರ್ಕಾರ ಯಾವುದೇ ರೀತಿಯ ಪಕ್ಷಪಾತ ಮಾಡುತ್ತಿಲ್ಲ. ಮುಖ್ಯಮಂತ್ರಿ ಅವರೂ ರಾಜ್ಯದಲ್ಲಿರುವ ಪ್ರತಿಯೊಬ್ಬ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಇರಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ಪ್ರತಿಯೊಬ್ಬ ಮತದಾರರಿಗೂ ಎಣ್ಯುಮರೇಷನ್ ಫಾರಂ ತಲುಪಬೇಕು. ಮತದಾರರ ಮಾಹಿತಿ ಸಮರ್ಪಕವಾಗಿ ಡಿಜಿಟೈಸೇಶನ್ ಆಗಬೇಕು. ಈಗಾಗಲೇ ಶೇಕಡಾ 90ರಷ್ಟು ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಕೊನೆಯ ಹಂತದಲ್ಲಿ ಕೆಲವು ಮತದಾರರ ಹೆಸರುಗಳು ತಪ್ಪಿಹೋಗುವ ಸಾಧ್ಯತೆ ಇರುತ್ತದೆ. ಸರಿಯಾದ ಮ್ಯಾಪಿಂಗ್ ಆಗದಿರುವುದು, ಕಾಗುಣಿತ ದೋಷಗಳು ಹಾಗೂ ಇತರ ತಾಂತ್ರಿಕ ಕಾರಣಗಳಿಂದ ಇಂತಹ ಸಮಸ್ಯೆಗಳು ಎದುರಾಗುತ್ತವೆ ಎಂದು ಹೇಳಿದರು.
ಯಾವೊಬ್ಬ ಅರ್ಹ ಮತದಾರರೂ ಪಟ್ಟಿಯಿಂದ ಹೊರಗುಳಿಯದಂತೆ ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಚರ್ಚಿಸಿ, ಪಕ್ಷಾತೀತವಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿದರು.