ರಾಯಚೂರು : ಬೈಕ್‌ಗೆ ಪೆಟ್ರೋಲ್ ಹಾಕಿಸಿಕೊಳ್ಳುವ ಸಣ್ಣ ವಿಚಾರವೊಂದು ವಿಕೋಪಕ್ಕೆ ತಿರುಗಿ, ಯುವಕರು ಪರಸ್ಪರ ಬೀದಿಯಲ್ಲಿ ಹೊಡೆದಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುರುಗುಂಟಾದಲ್ಲಿ ನಡೆದಿದೆ. ಗಲಾಟೆಯ ದೃಶ್ಯಗಳು ಪೆಟ್ರೋಲ್ ಬಂಕ್‌ನ ಸಿಸಿಟಿವಿ ಕ್ಯಾಮರಾದಲ್ಲಿ ಸಂಪೂರ್ಣವಾಗಿ ಸೆರೆಯಾಗಿವೆ.
ಗುರುಗುಂಟಾದ ಪೆಟ್ರೋಲ್ ಬಂಕ್ ಒಂದರಲ್ಲಿ ಇಂಧನ ತುಂಬಿಸಿಕೊಳ್ಳಲು ಗ್ರಾಹಕರು ಸರತಿಯಲ್ಲಿ ನಿಂತಿದ್ದರು. ಈ ವೇಳೆ ಯುವಕರ ಮಧ್ಯೆ "ನಾ ಮುಂದು, ತಾ ಮುಂದು" ಎಂದು ಪೆಟ್ರೋಲ್ ಹಾಕಿಸಿಕೊಳ್ಳುವ ವಿಚಾರವಾಗಿ ಮಾತಿನ ಚಕಮಕಿ ಆರಂಭವಾಗಿದೆ. ಸಣ್ಣದಾಗಿ ಶುರುವಾದ ಜಗಳ ನೋಡನೋಡುತ್ತಿದ್ದಂತೆ ತಾರಕಕ್ಕೇರಿದ್ದು, ಯುವಕರು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ.
ಗಲಾಟೆಯ ತೀವ್ರತೆಗೆ ಓರ್ವ ಯುವಕ ತೀವ್ರವಾಗಿ ಗಾಯಗೊಂಡಿದ್ದಾನೆ. ಗಾಯಾಳು ಯುವಕನ ಮೇಲೆ ನೀರಿನೋರು ದೊಡ್ಡಿ ಗ್ರಾಮದ ಇಬ್ಬರು ಯುವಕರು ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸಾರ್ವಜನಿಕರು ನೋಡುತ್ತಿದ್ದಂತೆಯೇ ಬಂಕ್ ಆವರಣದಲ್ಲೇ ಯುವಕರು ಅಟ್ಟಹಾಸ ಮೆರೆದಿದ್ದಾರೆ. ಸದ್ಯ ಈ ಮಾರಾಮಾರಿಯ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಘಟನೆ ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.