ಸಿಂಧನೂರು : ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದ ಆರೋಪದಡಿ ಪ್ರಕರಣ ಎದುರಿಸುತ್ತಿದ್ದ ಬಾಂಗ್ಲಾದೇಶದ ಪ್ರಜೆ ಶೋರನಜಿತ್ ಮಂಡಲ್‌ಗೆ 2ನೇ ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 5,000 ದಂಡ ವಿಧಿಸಿದೆ.
ಮುಖ್ಯ ಇಮಿಗ್ರೇಷನ್ ಅಧಿಕಾರಿಗಳು ಪಾಸ್‌ಪೋರ್ಟ್ ಪರಿಶೀಲನೆ ನಡೆಸಿದ ವೇಳೆ ಶೋರನಜಿತ್ ಮಂಡಲ್ ಭಾರತೀಯ ಪ್ರಜೆಯಲ್ಲ ಎಂಬುದು ದೃಢಪಟ್ಟಿದ್ದು, ಆತನ ಬಳಿಯಿದ್ದ ಭಾರತೀಯ ಪಾಸ್‌ಪೋರ್ಟ್ ಅನ್ನು ವಶಕ್ಕೆ ಪಡೆದಿದ್ದರು. ಈ ಸಂಬಂಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಅಂದಿನ ಪಿಎಸ್‌ಐಗಳಾದ ಸಿದ್ಧರಾಮೇಶ್ವರ ಗಡೇದ್ ಹಾಗೂ ರಾಘವೇಂದ್ರ ಜಿ.ಎಸ್. ನಡೆಸಿ, ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ರೂಪಾ ಸಿ. ವಗ್ಗಾ ಅವರು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿದರು.
ಅದರಂತೆ, ಶೋರನಜಿತ್ ಮಂಡಲ್‌ಗೆ ಮೂರು ವರ್ಷಗಳ ಸಜೆ ಮತ್ತು 5,000 ದಂಡ ವಿಧಿಸಿ ತೀರ್ಪು ನೀಡಲಾಗಿದೆ. ಅಲ್ಲದೆ, ಆರೋಪಿಯು ಮೂಲತಃ ಬಾಂಗ್ಲಾದೇಶದ ಪ್ರಜೆಯಾಗಿರುವುದರಿಂದ ಶಿಕ್ಷೆಯ ಅವಧಿ ಪೂರ್ಣಗೊಂಡ ಬಳಿಕ ರಾಜ್ಯ ಸರ್ಕಾರವು ಕಾನೂನುಬದ್ಧ ಕ್ರಮಗಳನ್ನು ಅನುಸರಿಸಿ ಆತನನ್ನು ಬಾಂಗ್ಲಾದೇಶಕ್ಕೆ ಕಳುಹಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ರಾಗಲಪರ್ವಿ ಹನುಮೇಶ ವಾದ ಮಂಡಿಸಿದ್ದರು.