ರಾಯಚೂರು : ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ನಡುವಿನ ರೈಲು ಸಂಪರ್ಕವನ್ನು ಮತ್ತಷ್ಟು ಸುಗಮಗೊಳಿಸುವ ನಿಟ್ಟಿನಲ್ಲಿ ರೈಲ್ವೆ ಮಂಡಳಿಯು ಮಹತ್ವದ ನಿರ್ಧಾರ ಕೈಗೊಂಡಿದೆ. ಸಾಂಸ್ಕೃತಿಕ ನಗರಿ ಮೈಸೂರು ಮತ್ತು ಆಂಧ್ರದ ಪ್ರಮುಖ ವಾಣಿಜ್ಯ ಕೇಂದ್ರವಾದ ಕಾಕಿನಾಡ ಪಟ್ಟಣದ ನಡುವೆ ನೂತನ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಆರಂಭಿಸಲು ಅಧಿಕೃತ ಅನುಮೋದನೆ ನೀಡಲಾಗಿದ್ದು, ಮೇ 1ರಿಂದ ಈ ಸೇವೆ ಕಾರ್ಯಾರಂಭ ಮಾಡಲಿದೆ.
ಸಂಚಾರ ಸಮಯ ಮತ್ತು ವೇಳಾಪಟ್ಟಿ
ರೈಲ್ವೆ ಇಲಾಖೆಯ ಮಾಹಿತಿಯಂತೆ, ಕಾಕಿನಾಡ ಪಟ್ಟಣದಿಂದ ಮೈಸೂರಿಗೆ ಸಂಚರಿಸುವ ರೈಲು ಸಂಖ್ಯೆ 17289 ಮೇ 1ರಿಂದ ಪ್ರತಿ ಸೋಮವಾರ ಮತ್ತು ಶುಕ್ರವಾರ ಸಂಚರಿಸಲಿದೆ. ಹಾಗೆಯೇ, ಮೈಸೂರಿನಿಂದ ಕಾಕಿನಾಡಕ್ಕೆ ಮರಳುವ ರೈಲು ಸಂಖ್ಯೆ 17290 ಮೇ 2ರಿಂದ ಪ್ರತಿ ಮಂಗಳವಾರ ಮತ್ತು ಶನಿವಾರ ಪ್ರಯಾಣಿಕರಿಗೆ ಲಭ್ಯವಿರಲಿದೆ. ವಾರಕ್ಕೆ ಎರಡು ದಿನ ಸಂಚರಿಸುವ ಈ ರೈಲು ಎರಡು ರಾಜ್ಯಗಳ ಪ್ರಮುಖ ನಗರಗಳನ್ನು ಬೆಸೆಯಲಿದೆ.
ರಾಯಚೂರು, ಮಂತ್ರಾಲಯ ಭಕ್ತರಿಗೆ ವರದಾನ
ಈ ರೈಲು ಸೇವೆಯು ಕೇವಲ ಪ್ರಯಾಣಿಕರಿಗಷ್ಟೇ ಅಲ್ಲದೆ, ಪ್ರವಾಸಿಗರು ಮತ್ತು ಶ್ರದ್ಧಾಳುಗಳಿಗೂ ದೊಡ್ಡ ಅನುಕೂಲ ಮಾಡಿಕೊಡಲಿದೆ. ವಿಶೇಷವಾಗಿ ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ತೆರಳುವ ಭಕ್ತರಿಗೆ ಈ ರೈಲು ಸಂಜೀವಿನಿಯಾಗಲಿದೆ. ಮೈಸೂರು, ಬೆಂಗಳೂರು ಮತ್ತು ಮಂಡ್ಯ ಭಾಗದ ಭಕ್ತರು ಈಗ ನೇರವಾಗಿ ಮಂತ್ರಾಲಯ ರೋಡ್ ನಿಲ್ದಾಣಕ್ಕೆ ಪ್ರಯಾಣಿಸಬಹುದು. ಕಲ್ಯಾಣ ಕರ್ನಾಟಕದ ಯಾದಗಿರಿ ಮತ್ತು ರಾಯಚೂರು ಭಾಗದ ಜನರಿಗೂ ಇದು ಹೈದರಾಬಾದ್ ಮತ್ತು ಆಂಧ್ರದ ಕರಾವಳಿ ಭಾಗಕ್ಕೆ ತೆರಳಲು ಸಹಕಾರಿಯಾಗಲಿದೆ.
ಪ್ರಮುಖ ನಿಲ್ದಾಣಗಳು
ಈ ನೂತನ ರೈಲು ಒಟ್ಟು 33 ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಕಾಕಿನಾಡ ಪಟ್ಟಣದಿಂದ ಹೊರಡುವ ರೈಲು ರಾಜಮಂಡ್ರಿ, ವಿಜಯವಾಡ, ಗುಂಟೂರು, ಸಿಕಂದರಾಬಾದ್ ಮೂಲಕ ಕರ್ನಾಟಕವನ್ನು ಪ್ರವೇಶಿಸಲಿದೆ. ರಾಜ್ಯದಲ್ಲಿ ಸೇಡಂ, ಯಾದಗಿರಿ, ರಾಯಚೂರು, ಮಂತ್ರಾಲಯ ರೋಡ್, ಆದೋನಿ, ಹಿಂದೂಪುರ, ಯಲಹಂಕ, ಕೆಎಸ್‌ಆರ್ ಬೆಂಗಳೂರು, ರಾಮನಗರ ಮತ್ತು ಮಂಡ್ಯ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲ್ಲುವ ಮೂಲಕ ಜನಸಾಮಾನ್ಯರಿಗೆ ಹತ್ತಿರವಾಗಲಿದೆ.
ರಾಯಚೂರಿಗೆ ಬೆರುವ ಸಮಯ :
ಈ ಹೊಸ ರೈಲು ಸೇವೆಯು ಪ್ರಯಾಣಿಕರಿಗೆ ನೇರ ಮತ್ತು ಹೆಚ್ಚು ಆರಾಮದಾಯಕ ಪ್ರಯಾಣವನ್ನು ನೀಡುತ್ತದೆ. ಕಾಕಿನಾಡದಿಂದ ಬರುವ ರೈಲು ಮುಂಜಾನೆ 2:30ಕ್ಕೆ ಯಾದಗಿರಿ, 3:48ಕ್ಕೆ ರಾಯಚೂರು ಮೂಲಕ ಮಧ್ಯಾಹ್ನ 12:20ಕ್ಕೆ ಕೆ.ಎಸ್.ಆರ್ ಬೆಂಗಳೂರು ಸಿಟಿ ತಲುಪುತ್ತದೆ. ಮೈಸೂರಿನಿಂದ ಸಂಜೆ ಹೊರಡುವ ರೈಲು ಮುಂಜಾನೆ 4:43ಕ್ಕೆ ರಾಯಚೂರು ಹಾಗೂ 5:58ಕ್ಕೆ ಯಾದಗಿರಿಯನ್ನು ತಲುಪುತ್ತದೆ. ಇದು ಅನೇಕ ಪ್ರಯಾಣಿಕರಿಗೆ ಪ್ರಯಾಣವನ್ನು ಹೆಚ್ಚು ಸುಲಭಗೊಳಿಸುತ್ತದೆ. ಇದು ಒಟ್ಟಾರೆ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಮತ್ತು ವರ್ಗಾವಣೆಯ ಸಮಯದಲ್ಲಿ ದೀರ್ಘ ಕಾಯುವಿಕೆಯ ಅನಾನುಕೂಲತೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಎರಡೂ ದಿಕ್ಕುಗಳಲ್ಲಿ ನಿಯಮಿತ ವೇಳಾಪಟ್ಟಿಯೊಂದಿಗೆ, ರೈಲುಗಳು ಆಂಧ್ರಪ್ರದೇಶ ಮತ್ತು ಕರ್ನಾಟಕದ ನಡುವಿನ ಸಂಪರ್ಕವನ್ನು ಇನ್ನಷ್ಟು ಬಲಪಡಿಸುತ್ತವೆ. ದೀರ್ಘ ಪ್ರಯಾಣವನ್ನು ಸುಗಮ ಮಾಡುತ್ತವೆ. ಇದೀಗ ಬೇಸಿಗೆ ರಜಾ ಸಂದರ್ಭದಲ್ಲಿಯೇ ಹೀಗೊಂದು ರೈಲು ಸಂಚಾರ ಶುರುವಾಗಿದ್ದು, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದಂತಾಗಿದೆ.
ಈ ಹೊಸ ರೈಲು ಸೇವೆಯಿಂದಾಗಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಹಳೆ ಮೈಸೂರು ಭಾಗದ ನಡುವಿನ ವಾಣಿಜ್ಯ ಚಟುವಟಿಕೆಗಳು ಹಾಗೂ ಪ್ರವಾಸೋದ್ಯಮಕ್ಕೆ ಹೊಸ ವೇಗ ಸಿಗಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ. ಕಾಕಿನಾಡ ಮತ್ತು ಮೈಸೂರು ನಡುವೆ ಹೆಚ್ಚುತ್ತಿರುವ ಪ್ರಯಾಣಿಕರ ಒತ್ತಡವನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.