ರಾಯಚೂರು : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಈಶ್ವರ್ ಬಿ. ಖಂಡ್ರೆ ಅವರಿಗೆ ನೂತನ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಮಿರ್ಜಾಪುರ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾಲ್ಕಿ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಈಶ್ವರ್ ಖಂಡ್ರೆ ಅವರು ಸಚಿವರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದು, ರಾಜ್ಯ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಸರ್ವ ಸಮುದಾಯಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಆಡಳಿತ ನಡೆಸಿರುವ ಖಂಡ್ರೆ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿದರೆ ರಾಜ್ಯದ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ನೂತನ ಸರ್ಕಾರ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಅದೇ ರೀತಿ, ಸಿಂಧನೂರು ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಿರಿಯ ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು. ವೀರಶೈವ ಲಿಂಗಾಯತ ಸಮುದಾಯವು ರಾಜ್ಯದ ಪ್ರಬಲ ಸಮುದಾಯಗಳಲ್ಲಿ ಒಂದಾಗಿದ್ದು, ನೂತನ ಸಚಿವ ಸಂಪುಟದಲ್ಲಿ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಹಿಂದಿನ ಸರ್ಕಾರದಲ್ಲಿ ಸಮುದಾಯದ ಎಂಟು ಮಂದಿ ಸಚಿವರಾಗಿ ಕಾರ್ಯನಿರ್ವಹಿಸಿದ್ದು, ಈ ಬಾರಿ ಕನಿಷ್ಠ 10 ರಿಂದ 11 ಮಂದಿ ವೀರಶೈವ ಲಿಂಗಾಯತ ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಅವರು ಹೇಳಿದರು.
ರಾಜ್ಯದ ಅಭಿವೃದ್ಧಿ ಹಾಗೂ ಸಮಾಜದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನೂತನ ಸರ್ಕಾರ ಈ ಬೇಡಿಕೆಗಳನ್ನು ಈಡೇರಿಸಲಿದೆ ಎಂಬ ವಿಶ್ವಾಸವಿದೆ ಎಂದು ಚಂದ್ರಶೇಖರ ಪಾಟೀಲ ಮಿರ್ಜಾಪುರ ತಿಳಿಸಿದರು. ಈ ಸಂದರ್ಭದಲ್ಲಿ ಪ್ರತಿಭಾ ಗೋನಾಳ, ಸೋಮನಾಥ ರೆಡ್ಡಿ, ಭಿಮರೆಡ್ಡಿ ಹಾಗೂ ಪರಮೇಶ್ವರ ಸಾಲಿಮಠ ಉಪಸ್ಥಿತರಿದ್ದರು.