ರಾಯಚೂರು : ಬಂಗಾರದ ಬೆಲೆಯಲ್ಲಿ ಉಂಟಾದ ಅನಿರೀಕ್ಷಿತ ಏರುಪೇರು ಮತ್ತು ಅದರಿಂದ ಉಂಟಾದ ಸಾಲದ ಹೊರೆಯಿಂದ ಬೇಸತ್ತ ಚಿನ್ನದ ವ್ಯಾಪಾರಿಯೊಬ್ಬರು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ನಡೆದಿದೆ.
ಘಟನೆಯ ವಿವರ :
ಸಿಂಧನೂರು ನಗರದ ಆದರ್ಶ ಕಾಲೋನಿಯ ನಿವಾಸಿ ಪ್ರಾಣೇಶ್ ವಾರ್ಣೆಕರ್ (ಮೃತರು) ಆತ್ಮಹತ್ಯೆಗೆ ಶರಣಾದವರು. ಇವರು ಬಂಗಾರ ವ್ಯಾಪಾರದ ಜೊತೆಗೆ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಮನೆಯವರೆಲ್ಲರೂ ಸಂಬಂಧಿಕರ ಮನೆಗೆ ಅಂದರೆ ಊರಿಗೆ ಹೋಗಿದ್ದ ಸಂದರ್ಭವನ್ನು ಬಳಸಿಕೊಂಡ ಪ್ರಾಣೇಶ್, ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ತೀವ್ರ ನಿರ್ಧಾರ ಕೈಗೊಂಡಿದ್ದಾರೆ. ಕುಟುಂಬಸ್ಥರು ಮರಳಿ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಡೆತ್‌ನೋಟ್ ಪತ್ತೆ :
ಸ್ಥಳಕ್ಕೆ ಧಾವಿಸಿದ ಸಿಂಧನೂರು ನಗರ ಪೊಲೀಸರು ಪರಿಶೀಲನೆ ನಡೆಸಿದಾಗ, ಮೃತರ ಜೇಬಿನಲ್ಲಿ ಎರಡು ಪುಟ ಹಾಗೂ ಬೆಡ್ ರೂಮಿನಲ್ಲಿ ಎರಡು ಪುಟ ಸೇರಿ ಒಟ್ಟು ನಾಲ್ಕು ಪುಟಗಳ ಸುದೀರ್ಘ ಡೆತ್ ನೋಟ್ ಪತ್ತೆಯಾಗಿದೆ. ಈ ಡೆತ್ ನೋಟ್‌ನಲ್ಲಿ ಬಂಗಾರದ ವ್ಯಾಪಾರದಲ್ಲಿ ಆದ ನಷ್ಟ, ಬೆಲೆ ಏರಿಳಿತದಿಂದ ಉಂಟಾದ ಸಾಲ ಹಾಗೂ ಸಾಲಗಾರರಿಂದ ಬರುತ್ತಿದ್ದ ಕಿರುಕುಳದ ಬಗ್ಗೆ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಸಾಲಗಾರರ ಕಿರಿಕಿರಿಗೆ ಬೆಸತ್ತು ತಾವು ಜೀವನ ಕೊನೆಗಾಣಿಸಿಕೊಳ್ಳುತ್ತಿರುವುದಾಗಿ ಅವರು ಬರೆದಿರುವ ಶಂಕೆ ವ್ಯಕ್ತವಾಗಿದೆ.
ಪೊಲೀಸ್ ತನಿಖೆ :
ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ದಿನದಿಂದ ದಿನಕ್ಕೆ ಬದಲಾಗುತ್ತಿರುವುದು ಇವರ ವ್ಯಾಪಾರದ ಮೇಲೆ ತೀವ್ರ ಪರಿಣಾಮ ಬೀರಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ಸದ್ಯ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡೆತ್ ನೋಟ್ ಆಧರಿಸಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಓರ್ವ ಉಪನ್ಯಾಸಕ ಹಾಗೂ ವ್ಯಾಪಾರಿಯಾಗಿದ್ದ ವ್ಯಕ್ತಿ ಇಂತಹ ನಿರ್ಧಾರ ಕೈಗೊಂಡಿರುವುದು ನಗರದಲ್ಲಿ ವಿಷಾದ ಮೂಡಿಸಿದೆ.