This is the title of the web page
This is the title of the web page
State News

ಮಾನಸಿಕ ಸಮತೋಲನ ಕಳೆದುಕೊಂಡ ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕರು


K2 ನ್ಯೂಸ್ ಡೆಸ್ಕ್ : ಮಹಾರಾಷ್ಟ್ರದ ವಿರೋಧ ಪಕ್ಷದ ಶಾಸಕರು ಶಾಸನ ಸಭೆಯಲ್ಲಿ ಮತ್ತು ಹೊರಗಡೆ ಬಹಳ ಹದ್ದುಮೀರಿ ಅಸಂಬದ್ಧ ಹೇಳಿಕೆ ನೀಡುತ್ತಿರುವುದನ್ನು ನೋಡಿದರೆ ಅವರು ಮಾನಸಿಕ ಸಂತುಲನ ಕಳೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟೀಕಿಸಿದರು.

ಅಲ್ಲಿನ ವಿರೋಧ ಪಕ್ಷಗಳು ಇದೇ ವಿಚಾರದ ಮೇಲೆ ಅವರ ರಾಜಕಾರಣ ಮಾಡಲು ಹೊರಟಿದ್ದಾರೆ. ಹಿಂದೆಯೂ ಎನ್ಸಿಪಿ ನಾಯಕರು ರಾಜಕೀಯ ಲಾಭ ಪಡೆಯಲು ಹೋಗಿ ವಿಫಲರಾಗಿದ್ದಾರೆ. ಈಗಲೂ ವಿಫಲರಾಗಿದ್ದಾರೆ. ಎರಡೂ ರಾಜ್ಯಗಳ ಜನ ಶಾಂತಿ ಸಾಮರಸ್ಯ ಕಾಪಾಡಿಕೊಂಡು, ವ್ಯಾಪಾರ ವ್ಯವಹಾರ, ಓಡಾಟ ಮಾಡುತ್ತಿರುವಾಗ ಇವರು ಭಾರಿ ಸಂಖ್ಯೆಯಲ್ಲಿ ರಾಜ್ಯಕ್ಕೆ ಪ್ರವೇಶಿಸಲು ಹೊರಟಿದ್ದಾರೆ.

ಜನರ ಬೆಂಬಲವಿಲ್ಲದಿದ್ದರೂ, ರಾಜಕೀಯ ಪಕ್ಷಗಳ ಧ್ವಜ ಹಿಡಿದುಕೊಂಡು ಬಂದಿರುವುದನ್ನು ನೋಡಿದರೆ, ವಿರೋಧ ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಮಾತ್ರ ಬಂದಿದ್ದರು. ಇದು ರಾಜಕೀಯ ಪ್ರೇರಿತ ಎಂದು ಸ್ಪಷ್ಟವಾಗುತ್ತದೆ ಎಂದು ನುಡಿದರು. ರಾಜ್ಯದ ಕಾಂಗ್ರೆಸ್ ನಾಯಕರು ಮಹಾರಾಷ್ಟ್ರದಲ್ಲಿನ ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಬೇಕು ಎಂದು ಸಲಹೆ ನೀಡಿದ ಮುಖ್ಯಮಂತ್ರಿಗಳು ನಾವು ಕೂಡ ನಮ್ಮ ಪಕ್ಷದವರಿಗೆ ಮಾತನಾಡಿದ್ದೇವೆ. ಇದು ಬೀದಿಯಲ್ಲಿ ಇತ್ಯರ್ಥವಾಗುವ ವಿಚಾರವಲ್ಲ.

ನಮ್ಮ ಕೇಂದ್ರ ಗೃಹ ಸಚಿವರೂ ಇದನ್ನೇ ಹೇಳಿದ್ದಾರೆ ಎಂದರು. ಮಹಾರಾಷ್ಟ್ರದವರೇ ಇಂದು ಸುಪ್ರೀಂ ಕೋರ್ಟಿಗೆ ಹೋಗಿದ್ದಾರೆ. ಅವರಿಗೆ ತಮ್ಮ ದಾವೆ ದುರ್ಬಲವಾಗಿದೆ ಎಂದು ಅರಿವಾಗಿದೆ. ಅದಕ್ಕಾಗಿಯೇ ಇಂತಹ ಪರಿಸ್ಥಿತಿ ಸೃಷ್ಟಿಸಿ ಲಾಭ ಪಡೆಯುವ ಪ್ರಯತ್ನ ಮಾಡುತ್ತಿದ್ದು, ಅದು ಯಶಸ್ವಿಯಾಗುವುದಿಲ್ಲ. ಇದು ಮಹಾರಾಷ್ಟ್ರದ ವಿರೋಧ ಪಕ್ಷದ ಅಪ್ರಬುದ್ಧತೆಯ ಪ್ರದರ್ಶನ. ಮತ್ತು ಅವರು ಚೈನಾ ರೀತಿ ಆಕ್ರಮಣ ಮಾಡುತ್ತೇವೆ ಎಂಬ ಹೇಳಿಕೆ ನೀಡಿದ್ದಾರೆ. ಆದರೆ ಅವರಿಗೆ ಈ ಕಡೆ ಭಾರತ ದೇಶ ಇದೆ ಎಂದು ಗೊತ್ತಿಲ್ಲ. ಚೈನಾ ಆಕ್ರಮಣವನ್ನು ನಮ್ಮ ಸೈನಿಕರು ಹಿಮ್ಮೆಟ್ಟಿಸಿದಂತೆ, ಅವರನ್ನು ಹಿಮ್ಮೆಟ್ಟಿಸುವ ಶಕ್ತಿ ಕನ್ನಡಿಗರಿಗಿದೆ. ನಾವು ಒಂದೇ ದೇಶದಲ್ಲಿರುವವರು. ಅದಾಗ್ಯೂ ಅವರು ಬಳಸಿದ ಪದಪ್ರಯೋಗಕ್ಕೆ ಉತ್ತರ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.


[ays_poll id=3]