
K2 ನ್ಯೂಸ್ ಡೆಸ್ಕ್ : ಸಣ್ಣ ಮತ್ತು ಅತೀ ಸಣ್ಣ ರೈತರ ಕಲ್ಯಾಣಕ್ಕಾಗಿ ಆರಂಭಿಸಿದ್ದ ಗಂಗಾ ಕಲ್ಯಾಣ ಯೋಜನೆಯಲ್ಲಿ ಹಗರಣವಾಗಿದ್ದು, ಇದರಲ್ಲಿ ಗುತ್ತಿಗೆದಾರರ ಕಲ್ಯಾಣವಾಗಿದೆ ಎಂಬ ದೂರಿನ ಹಿನ್ನೆಲೆ ಈ ಆವರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿ ಗೆ ಒಪ್ಪಿಸಲಾಗಿದ್ದು ರಾಯಚೂರು ಸೇರಿ ರಾಜ್ಯದೆಲ್ಲೆಡೆ ಅಕ್ರಮ ವ್ಯವಹಾರದ ತನಿಖೆ ಚುರುಕುಗೊಂಡಿದೆ.
ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಕೊಳವೆ ಬಾವಿ ಕೊರೆದು ಪಂಪ್ಸೆಟ್ ಅಳವಡಿಸಿ ನೀರನ್ನು ಒದಗಿಸುವ ಯೋಜನೆಯೇ ಗಂಗಾ ಕಲ್ಯಾಣ. ವಿವಿಧ ನಿಗಮಗಳಿಂದ ಯೋಜನೆ ಅನುಷ್ಠಾನಕ್ಕೆ ಅವಕಾಶ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಮಾಡಲಾಗಿತ್ತು. ಪ್ರತಿಫಲವಾಗಿ ಗುತ್ತಿಗೆದಾರರು ನಕಲಿ ದಾಖಲಾತಿಗಳನ್ನು ಸಲ್ಲಿಸಿ ನಿಯಮಗಳನ್ನು ಉಲ್ಲಂಘಿಸಿ ಗುತ್ತಿಗೆ ಪಡೆದಿದ್ದರು. ಇದಲ್ಲದೆ, ಯೋಜನೆಯ ಅನುದಾನ ದುರುಪಯೋಗವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸಹ ಅಕ್ರಮದಲ್ಲಿ ಶಾಮೀಲಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು.
ಗಂಗಾ ಕಲ್ಯಾಣದಲ್ಲಿ ದಾಖಲಾದ ದೂರುಗಳು :
ಕೊಳವೆ ಬಾವಿ ಕೊರೆಯದೇ ಗುತ್ತಿಗೆದಾರರಿಗೆ ಬಿಲ್ ಪಾವತಿ
ಕೊಳವೆ ಬಾವಿಯಲ್ಲಿ ನೀರಿನ ಲಭ್ಯತೆ ಕಡಿಮೆ ಇದ್ದರೂ ಹೆಚ್ಚಿನ ನೀರು ಸಿಕ್ಕಿದೆ ಎಂದು ಹಣ ಬಿಡುಗಡೆ
ಕೊಳವೆ ಬಾವಿಗೆ ಕಳಪೆ ದರ್ಜೆಯ ಪಂಪ್ಸೆಟ್ಗಳ ಅಳವಡಿಕೆ
ಅರ್ಜಿಯಲ್ಲಿ ಉಲ್ಲೇಖಿಸಿದ್ದೇ ಬೇರೆ ಸರ್ವೆ ನಂಬರ್, ಬಾವಿ ತೋಡಿದ್ದೆ ಬೇರೆ ಸರ್ವೆ ನಂಬರ್ನಲ್ಲಿ
ಕೊಳೆವೆ ಬಾವಿಗೆ ಅಳವಡಿಸಿದ ಕೇಸಿಂಗ್ ಪೈಪ್ ಬೇರೆ, ದಾಖಲೆಯಲ್ಲಿ ಉಲ್ಲೇಖಿಸಿದ್ದೆ ಬೇರೆ
ಬೋರ್ವೆಲ್ ಕೊರೆದು ವರ್ಷಗಳೇ ಕಳೆದರು ಪಂಪ್ಸೆಟ್ ಅಳವಡಿಸಿಲ್ಲ, ವಿದ್ಯುತ್ ಸಂಪರ್ಕ ನೀಡಿಲ್ಲ
ಕಾಮಗಾರಿ ಪರಿಶೀಲನೆ ನಡೆಸದೆ ಅಧಿಕಾರಿಗಳಿಂದ ಗುತ್ತಿಗೆದಾರರಿಗೆ ಹಣ ಬಿಡುಗಡೆ.
ದೂರುಗಳ ಹಿನ್ನೆಲೆ ರಾಯಚೂರು, ಬಳ್ಳಾರಿ, ಕೊಲಾರ, ಹಾಸನ, ಮಡಿಕೇರಿ, ಮೈಸೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಸಮಗ್ರ ತನಿಖೆಗೆ ಸಿಐಡಿಗೆ ವಹಿಸುವುದಾಗಿ ಭರವಸೆ ನೀಡಿತ್ತು. ಅಧಿಕೃತವಾಗಿ ಹಸ್ತಾಂತರ ಮಾಡಿರಲಿಲ್ಲ. ಸರ್ಕಾರ ಬದಲಾಗುತ್ತಿದಂತೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕ, ವಿಧಾನಸೌಧ ಠಾಣೆಗೆ ಗಂಗಾ ಕಲ್ಯಾಣ ಯೋಜನೆ ಅಕ್ರಮ ವ್ಯವಹಾರ ಕುರಿತು ದೂರು ಸಲ್ಲಿಸಿದ್ದರು. 2019-20ನೇ ಮತ್ತು 2020-21ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ 14,577 ಕೊಳವೆ ಬಾವಿ ಕೊರೆಸಲು 431 ಕೋಟಿ ರೂ. ಟೆಂಡರ್ ಕರೆಯಲಾಗಿತ್ತು. ಟೆಂಡರ್ ಹಂಚಿಕೆ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದ್ದು, ಯೋಜನೆಗೆ ಮೀಸಲಿಟ್ಟ ಹಣದಲ್ಲಿ ಅಕ್ರಮಗಳು ನಡೆದಿದೆ. ಇದರಲ್ಲಿ ಹಿಂದಿನ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದರು.
![]() |
![]() |
![]() |
![]() |
![]() |
[ays_poll id=3]