ರಾಯಚೂರು: ಮುಂಗಾರು ಆರಂಭದ ಮೃಗಶಿರಾ ನಕ್ಷತ್ರದ ಅಂಗವಾಗಿ ರಾಯಚೂರಿನಲ್ಲಿ ಸಾಂಪ್ರದಾಯಿಕವಾಗಿ ನೀಡಲಾಗುವ ಮೀನಿನ ಮದ್ದು (ಫಿಷ್ ಥೆರಪಿ) ಪಡೆಯಲು ಸಾವಿರಾರು ಜನರು ಮುಗಿಬಿದ್ದರು. ನಗರದ ಜಲಗಾರ ತಿಕ್ಕಣ್ಣ ಕುಟುಂಬದವರು ಹಲವು ವರ್ಷಗಳಿಂದ ಈ ವಿಶೇಷ ಮದ್ದನ್ನು ವಿತರಿಸುತ್ತಿದ್ದು, ಈ ಬಾರಿ ಕೂಡ ಬೆಳಗಿನ ಜಾವದಿಂದಲೇ ಜನರು ಸರದಿ ಸಾಲಿನಲ್ಲಿ ನಿಂತು ಮದ್ದು ಪಡೆದರು.
ಬೆಳಿಗ್ಗೆ ಐದು ಗಂಟೆಯಿಂದಲೇ ವಿವಿಧ ಭಾಗಗಳಿಂದ ಆಗಮಿಸಿದ್ದ ಜನರು ಖಾಲಿ ಹೊಟ್ಟೆಯಲ್ಲಿ ಮದ್ದು ಸೇವಿಸಲು ಕಾದು ಕುಳಿತಿದ್ದರು. ಸುಮಾರು 2 ರಿಂದ 2.5 ಇಂಚು ಉದ್ದದ ಜೀವಂತ ಮುರ್ರೆಲ್ ಮೀನುಗಳ ಬಾಯಿಯಲ್ಲಿ ಆಯುರ್ವೇದ ಔಷಧಿಯ ಮಾತ್ರೆಯನ್ನು ಇಟ್ಟು, ಅದನ್ನು ನುಂಗಿಸುವ ಮೂಲಕ ಈ ಚಿಕಿತ್ಸೆ ನೀಡಲಾಗುತ್ತದೆ. ಸಣ್ಣ ಮೀನುಗಳನ್ನು ಜೀವಂತವಾಗಿ ನುಂಗಿಸುವ ಈ ವಿಧಾನವನ್ನು ಫಿಷ್ ಥೆರಪಿ ಎಂದು ಕರೆಯಲಾಗುತ್ತದೆ.
ದಮ್ಮು, ಕೆಮ್ಮು, ಶೀತ, ಅಸ್ತಮಾ ಸೇರಿದಂತೆ ಉಸಿರಾಟ ಸಂಬಂಧಿತ ಹಲವು ತೊಂದರೆಗಳಿಗೆ ಮುಂಜಾಗ್ರತಾ ಕ್ರಮವಾಗಿ ಈ ಮದ್ದನ್ನು ಸೇವಿಸಲಾಗುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ. ಬೇಸಿಗೆ ಮುಗಿದು ಮುಂಗಾರು ಆರಂಭವಾಗುವ ಸಂದರ್ಭದಲ್ಲಿ ವಾತಾವರಣದಲ್ಲಿ ಆಗುವ ಬದಲಾವಣೆಗಳಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮೃಗಶಿರಾ ನಕ್ಷತ್ರದ ದಿನ ಈ ಮದ್ದನ್ನು ಪಡೆಯುವ ಸಂಪ್ರದಾಯ ಮುಂದುವರಿದಿದೆ.
ಈ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಮೀನಿನ ಮದ್ದು ವಿತರಣಾ ಕೇಂದ್ರದ ಬಳಿ ದಿನವಿಡೀ ಜನಜಂಗುಳಿ ಕಂಡುಬಂದಿದ್ದು, ಮಹಿಳೆಯರು, ಪುರುಷರು ಹಾಗೂ ಮಕ್ಕಳೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಮದ್ದು ಪಡೆದರು.