ರಾಯಚೂರು ಭಾರತ ವನ ಯೋಜನೆಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ
ರಾಯಚೂರು : ಭಾರತ ಸರ್ಕಾರದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಜೂನ್ 04ರ ಗುರುವಾರ ದಂದು ರಾಯಚೂರು ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾಡಳಿತ, ಎಸ್‌ಪಿಎಮ್‌ಸಿಐಎಲ್ ಸಂಸ್ಥೆಯ ಸಾಮಾಜಿಕ ಕಳಕಳಿಯ (ಸಿಎಸ್‌ಆರ್) ಸಹಯೋಗದೊಂದಿಗೆ ಜೂನ್ 05ರ ವಿಶ್ವ ಪರಿಸರ ದಿನಾಚರಣೆ-2026ರ ಅಂಗವಾಗಿ (ವಿಶೇಷ ಹಸಿರು ಅಭಿಯಾನ ಅಂಗವಾಗಿ) ತಾಯಿಯ ಹೆಸರಿನಲ್ಲಿ ಒಂದು ಮರ ಕಾರ್ಯಕ್ರಮದಡಿ ರಾಯಚೂರು ಭಾರತ ವನ ಯೋಜನೆಗೆ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ
ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿದ್ಯಾರ್ಥಿಗಳೊಂದಿಗೆ ಗಿಡಮರಗಳ ನೆಡುವುದರ ಮಹತ್ವ ಕುರಿತು ಸಂವಾದ ನಡೆಸಿದರು.
ಈ ವೇಳೆ ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್. ಅವರು ಮಾತನಾಡಿ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ಮಹತ್ವಾಕಾಂಕ್ಷೆ ಜಿಲ್ಲೆಯ ಪ್ರಗತಿ ಪರಿಶೀಲನೆ ಸಭೆಯನ್ನು ಹಣಕಾಸು ಸಚಿವರು ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ರಾಯಚೂರು ಜಿಲ್ಲೆಯು ಮಹತ್ವಾಕಾಂಕ್ಷೆ ಜಿಲ್ಲೆಯ ಪಟ್ಟಿಯಿಂದ ಆದಷ್ಟು ಬೇಗನೆ ಹೊರ ಬರಲಿದೆ ಎಂದರು. ಭಾರತ ವನ ಯೋಜನೆಯಡಿ ಒಟ್ಟು 60,000 ಸ್ಥಳೀಯ ಜಾತಿಯ ಸಸಿಗಳನ್ನು ನೆಡಲಾಗುತ್ತಿದೆ.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ 10,000 ಸಸಿಗಳು ಹಾಗೂ ರಾಯಚೂರು ಮಹಾನಗರ ಪಾಲಿಕೆಯ ಘನ ತ್ಯಾಜ್ಯ ನಿರ್ವಹಣಾ ಘಟಕ ಪ್ರದೇಶದಲ್ಲಿ 50,000 ಸಸಿಗಳನ್ನು ನೆಡಲಾಗುತ್ತದೆ ಎಂದರು.
ಪರಿಸರ ಸಮತೋಲನವನ್ನು ಕಾಪಾಡಲು ಒಟ್ಟು ಭೌಗೋಳಿಕ ವಿಸ್ತೀರ್ಣದ ಕನಿಷ್ಠ 30 ಶೇಕಡಾ ಭಾಗ ಅರಣ್ಯಾವರಣ ಹೊಂದಿರಬೇಕೆಂಬ ರಾಷ್ಟ್ರೀಯ ಗುರಿ ಇದ್ದರೂ, ರಾಯಚೂರು ಜಿಲ್ಲೆಯ ಅರಣ್ಯಾವರಣವು 2 ಶೇಕಡಾಕ್ಕಿಂತಲೂ ಕಡಿಮೆ ಇದೆ. ಇದರ ಪರಿಣಾಮವಾಗಿ ಭೂಮಿಯ ಉಷ್ಣತೆ ಹೆಚ್ಚಳ, ಮಣ್ಣಿನ ಫಲವತ್ತತೆ ಕುಸಿತ, ಭೂಗರ್ಭ ಜಲಮಟ್ಟ ಇಳಿಕೆ, ಜೀವ ವೈವಿಧ್ಯತೆಯ ನಷ್ಟ ಹಾಗೂ ಹವಾಮಾನ ವೈಪರೀತ್ಯಗಳಂತಹ ಸಮಸ್ಯೆಗಳು ಹೆಚ್ಚಾಗುತ್ತಿವೆ.
ಈ ಹಿನ್ನೆಲೆಯಲ್ಲಿ ಭಾರತ ವನ ಯೋಜನೆ ರಾಯಚೂರು ಜಿಲ್ಲೆಯ ಪರಿಸರ ಭವಿಷ್ಯಕ್ಕೆ ಹೊಸ ಆಶಾಕಿರಣವಾಗಲಿದೆ ಎಂದರು.