K2kannadanews.in
Local News ರಾಯಚೂರು : ಸಾರಿಗೆ ನೌಕರರ ಹಿಂಬಾಕಿ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸಾರಿಗೆ ನೌಕರರು ಹಾಗೂ ಸಿಬ್ಬಂದಿಗಳು ಅನಿರ್ಧಿಷ್ಠಾವಧಿ ಧರಣಿಗೆ ಇಳಿದ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಬಸ್ ಸಂಚಾರ ಸ್ಥಗಿತಗೊಂಡ ಕಾರಣ ಪ್ರಯಾಣಿಕರು ಪರದಾಡುವಂತಾಯಿತು.
ರಾಯಚೂರು ಜಿಲ್ಲೆಯಾದ್ಯಂತ ಸಾರಿಗೆ ನೌಕರರು ಬೆಳಿಗ್ಗೆ 6 ಗಂಟೆಯಿಂದಲೇ ಪ್ರತಿಭಟನೆ ಆರಂಬಿಸಿದ್ದು, ಕೇಂದ್ರ ಬಸ್ ನಿಲ್ದಾಣದಲ್ಲಿ ಬೇರೆ ಊರುಗಳಿಂದ ಬಂದ ಪ್ರಯಾಣಿಕರು ಬಸ್ ಗಾಗಿ ಕಾದು ಕಾದು ಸುಸ್ತಾದರು. ಅನೇಕರಿಗೆ ಬಸ್ ಸಂಚಾರ ಇಲ್ಲದ ಬಗ್ಗೆ ಮಾಹಿತಿ ಇರದ ಕಾರಣ ಬಸ್ ನಿಲ್ದಾಣದಲ್ಲಿ ಮಹಿಳೆಯರು, ವಯಸ್ಕರು ಬಸ್ ಗಾಗಿ ಕುಳಿತಿದ್ದರೂ ಬಳಿಕ ಸಾರಿಗೆ ಸಿಬ್ಬಂದಿಯಿಂದ ಮಾಹಿತಿ ಪಡೆದು ಮನೆಗೆ ವಾಪಸ್ ಹಿಂತಿರುಗಿದರು. ಇನ್ನೂ ರಾತ್ರಿ ತಂಗಿದ್ದ ಬಸ್ಸುಗಳಿಗೆ ಗ್ರಾಮಾಂತರ ಭಾಗದಿಂದ ಆಗಮಿಸಿದ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳಲು ಪರದಾಡಿದ ಘಟನೆ ಜರುಗಿ ಪ್ರಯಾಣಿಕರು ಸಾರಿಗೆ ಇಲಾಖೆ ಮತ್ತು ಸರಕಾರಕ್ಕೆ ಹಿಡಿ ಶಾಪ ಹಾಕಿದರು.
ಬಸ್ ನಿಲ್ದಾಣದಲ್ಲಿ ಬಸ್ ಗಳಿಲ್ಲದೇ ಪ್ರಾಂಗಣ ಬಿಕೋ ಎನ್ನುತ್ತಿತ್ತು. ಇನ್ನೊಂದು ಕಡೆ ಖಾಸಗಿ ವಾಹನಗಳ ಮಾಲೀಕರು ಇದನ್ನೇ ಬಂಡವಾಳವಾಗಿಸಿಕೊಂಡು ದುಪ್ಪಟ್ಟು ಹಣ ಪ್ರಯಾಣಿಕರಿಂದ ಸುಲಿಯುತ್ತಿದ್ದಾರೆ. ತುರ್ತು ಕಾರ್ಯಗಳಿಗೆ ಹೋಗುವು, ಬೇರೆ ಊರುಗಳಿಂದ ಬಂದವರು ಅನಿವಾರ್ಯವಾಗಿ ದುಪ್ಪಟ್ಟು ಹಣ ಕೊಟ್ಟು ಪ್ರಯಾಣಿಸಿದರು.