K2kannadanews.in
Reporter’s cricket match ರಾಯಚೂರು : ರಾಯಚೂರು ಜಿಲ್ಲಾ ಮಟ್ಟದ ಕಾರ್ಯನಿರತ ಪತ್ರಕರ್ತ ಸಂಘದಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಯಚೂರು ರಾಯಲ್ಸ್ ತಂಡ 6 ವಿಕೆಟ್ ನಿಂದ ಭರ್ಜರಿ ಗೆಲುವು ದಾಖಲಿಸಿತು.
ನೇತಾಜಿ ನಗರದ ಪಿ.ಐ.ಎಸ್ ಚಂದ್ರಪ್ಪರವರು ಫೈನಲ್ ಪಂದ್ಯಾವಳಿಯಲ್ಲಿ ಟಾಸ್ ಮಾಡುವ ಮೂಲಕ ಉದ್ಘಾಟಿಸಿದರು. ಟಾಸ್ ಗೆದ್ದ ಶ್ರೀಕಾಂತ ಸಾವೂರ್ ನೇತೃತ್ವದ ರಾಯಚೂರು ರಾಯಲ್ಸ್ ತಂಡ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಿಂದಲೂ ಬಿಗಿ ಬೌಲಿಂಗ್ ಮೂಲಕ ಮಾನ್ವಿ ತಂಡವನ್ನು ಕಟ್ಟಿಹಾಕಲಾಯಿತು. ನಿಗದಿತ 7 ಓವರ್ ಗಳಲ್ಲಿ ಮಾನ್ವಿ ತಂಡ ರಾಜಶೇಖರ್ ಅವರ ಉತ್ತಮ ಬ್ಯಾಟಿಂಗ್ ನಿಂದ 37 ರನ್ ಗಳನ್ನು ಗಳಿಸಿತು. ಆರಂಭದಿಂದಲೇ ಬಿಗಿ ಬೌಲಿಂಗ್ ಮಾಡಿದಂತಹ ರಾಯಚೂರು ರಾಯಲ್ಸ್ ಪರವಾಗಿ ಭೀಮೇಶ್ 2 ವಿಕೆಟ್, ಶ್ರೀಕಾಂತ್ ಸಾವೂರ್ ರವರು 1 ವಿಕೆಟ್ , ಸುವರ್ಣ ಶೀನು 2 ವಿಕೆಟ್ ಹಾಗೂ ನೀಲಕಂಠರವರು 1 ವಿಕೆಟ್ ಪಡೆಯುವ ಮೂಲಕ ಮಾನ್ವಿ ತಂಡವನ್ನು ಕಟ್ಟಿಹಾಕಲಾಯಿತು.
ನಂತರ ಬ್ಯಾಟಿಂಗ್ ಆರಂಭಿಸಿದ ರಾಯಚೂರು ತಂಡ ಆರಂಭದಲ್ಲಿಯೇ ಶ್ರೀಕಾಂತ್ ಸಾವೂರ್ , ಸುವರ್ಣ ಶೀನುರವರ ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟದಲ್ಲಿತ್ತು ನಂತರದಲ್ಲಿ ದುರ್ಗೇಶ ಹಾಗೂ ಭೀಮೇಶ್ ಪೂಜಾರವರ ತಾಳ್ಮೆ ಆಟದಿಂದ ಕುಸಿತಕ್ಕೆ ಬ್ರೇಕ್ ಹಾಕಲಾಯಿತು. ಭೀಮೇಶ್ ಪೂಜಾರ್ 15 ರನ್ , ನೀಲಕಂಠ ಸ್ವಾಮಿ 6 ರನ್ , ಮಲ್ಲನಗೌಡ ಪಾಟೀಲ್ 9 ರನ್ ಗಳಿಸುವ ಮೂಲಕ ನಾಲ್ಕು ಎಸೆತ ಇರುವಂತಯೇ ರಾಯಚೂರು ರಾಯಲ್ಸ್ ಗೆಲುವಿನ ಕೇಕೆ ಹಾಕಿತು. ಈ ಮೂಲಕ ಮೊದಲ ವರ್ಷದ ಪಂದ್ಯಾಟದಲ್ಲಿ ರಾಯಚೂರು ರಾಯಲ್ಸ್ ತಂಡ ಪ್ರಶಸ್ತಿಗೆ ಮುತ್ತಿಕ್ಕಿದರೆ ಮಾನ್ವಿ ತಂಡ ರನ್ನರ್ ಅಪ್ ಗೆ ತೃಪ್ತಿ ಪಟ್ಟುಕೊಂಡಿತು.
ಈ ಒಂದು ಪಂದ್ಯಾವಳಿಯಲ್ಲಿ 7 ತಂಡಗಳಾದ ರಾಯಚೂರು ರಾಯಲ್ಸ್, ರಾಯಚೂರು ರೈಡಸ್೯, ಮಾನ್ವಿ, ಸಿಂಧನೂರು, ಲಿಂಗಸುಗೂರು, ಸಿರವಾರ ದೇವದುರ್ಗ ಭಾಗಿಯಾಗಿದ್ದವು.