K2kannadanews.in
KKRTC ಲಿಂಗಸೂಗೂರು : ಕೂಲಿ ಕೆಲಸಕ್ಕೆ ಎಂದು ಹುಬ್ಬಳ್ಳಿಗೆ ಹೋಗುತ್ತಿದ್ದ ವೇಳೆ KKRTC ಬಸ್ಸಿನಲ್ಲೇ ಗರ್ಭಿಣಿಗೆ ಹೆರಿಗೆಯಾಗಿದ್ದು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಭಾನುವಾರ ರಾತ್ರಿ ಜರುಗಿದೆ.
ಹೌದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸೋಮನಮರಡಿ ಗ್ರಾಮದ ಗರ್ಭಿಣಿ ಶಾಂಭವಿ (೧೯) ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ. ಕೆಲ ದಿನ ಗಳ ಹಿಂದೆ ಬರಗಾಲವಿದ್ದ ವೇಳೆ ಕೆಲಸವಿಲ್ಲದೆ ಕಷ್ಟದಲ್ಲಿದ್ದ ಇವರು ಕುಟುಂಬ ಸಮೇತರಾಗಿ ಕೂಲಿ ಕೆಲಸ ಹರಸಿ ಹುಬ್ಬಳ್ಳಿಗೆ ತೆರಳಿದ್ದರು. ನಿನ್ನೆ ಗ್ರಾಮಕ್ಕೆ ಮರಳಿ ಬರುವಾಗ ಮುದಗಲ್ ಪಟ್ಟಣ ಸಮೀಪದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಗ ಅದೇ ಬಸ್ನಲ್ಲಿ ಪ್ರಯಾಣ ಮಾಡುತಿದ್ದ ಆಶಾ ಕಾರ್ಯಕರ್ತೆ ಮೇರಿ ಎನ್ನುವವರು ಹೆರಿಗೆ ಮಾಡಿಸಿದ್ದಾರೆ.
ಇನ್ನೂ ಲಿಂಗಸೂಗೂರು ಘಟಕ ಕೆಕೆಆರ್ಟಿಸಿ ಚಾಲಕ ಸಿದ್ಧಲಿಂಗಪ್ಪ ಶಿರೂರು, ನಿರ್ವಾಹಕ ಬಸಯ್ಯ ಹಿರೇಮಠ್ ಅವರು ಕೂಡಲೇ ಬಾಣಂತಿಯನ್ನು ಮುದಗಲ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಸ್ ಸಮೇತ ತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ತಾಯಿ ಆರೋಗ್ಯವಾಗಿದ್ದು, ಮಗುವಿಗೆ ಉಸಿರಾಟ ತೊಂದರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಕೆಕೆಆರ್ಟಿಸಿ ಸಿಬ್ಬಂದಿಗಳನ್ನು ಸ್ಥಳೀಯರು ಶ್ಲಾಘಿಸಿದರು.