K2kannadanews.in
Local News ರಾಯಚೂರು : ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿದ ಮಾರನೇ ದಿನವೇ ಮನೆಗಳಿಗೆ ಚರಂಡಿ ನೀರು ನುಗ್ಗಿ ನಿವಾಸಿಗಳು ಮತ್ತು ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಗಾಣದಾಳ ಗ್ರಾಮದಲ್ಲಿ ನಿರ್ಮಾಣವಾಗಿದೆ.
ಹೌದು ರಾಯಚೂರು ತಾಲೂಕಿನ ಗಾಣದಾಳ ಗ್ರಾಮದಲ್ಲಿ ಗ್ರಾಮಂತರ ಶಾಸಕ ದದ್ದಲ್ ಬಸನಗೌಡ ಅವರ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ ನಿರ್ಮಿಸಲಾದ ಸಿಸಿ ರಸ್ತೆ ಸ್ಥಳದಲ್ಲಿ ನ್ಯಾಯಾಲಯ ತಡೆಯಾಜ್ಞೆ ಇದ್ದರೂ ಇಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ ಎಂಬ ಗಂಭೀರ ಆರೋಪವು ಇದೆ. ಇದು ಒಂದು ಕಡೆಯಾದ್ರೆ, ಇನ್ನೊಂದು ಕಡೆ ಈ ಒಂದು ರಸ್ತೆಯನ್ನು ಸಂಪೂರ್ಣ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಸಿಸಿ ರಸ್ತೆ ನಿರ್ಮಾಣದಿಂದ ಚರಂಡಿ ನೀರು ರಸ್ತೆ ಮೇಲೆ ಬಂದಿದ್ದು, ಈ ಚರಂಡಿ ನೀರು ಮನೆಗೆ ನುಗ್ಗುತ್ತಿವೆ. ಅಷ್ಟೇ ಅಲ್ಲದೆ ಇಲ್ಲಿ ನಿವಾಸಿಗಳು, ಸಾರ್ವಜನಿಕರು ಚರಂಡಿ ನೀರಿನಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಗುತ್ತಿಗೆದಾರರು ನಿರ್ಮಿಸಿದ ಅವೈಜ್ಞಾನಿಕ ರಸ್ತೆಯಿಂದ ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಗ್ರಾಮ ಪಂಚಾಯಿತಿ ಪಿ ಡಿ ಓ ಅವರಿಗೆ ಮಾಹಿತಿ ನೀಡಿದರೆ ನಾನೇನು ಮಾಡಲು ಆಗುವುದಿಲ್ಲ ಎಂದು ನಿರ್ಲಕ್ಷ್ಯದ ಉತ್ತರ ನೀಡುತ್ತಿದ್ದಾರೆ ಎಂದು ಅಲ್ಲಿನ ನಿವಾಸಿಗಳು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂಬುದು ಅಲ್ಲಿನ ನಿವಾಸಿಗಳ ಒತ್ತಾಯವಾಗಿದೆ.