This is the title of the web page
This is the title of the web page
Local News

ಉದ್ಯೋಗ ಮಿತ್ರ ಯೋಜನೆ : ಜಿಲ್ಲಾಧಿಕಾರಿಗಳ ಕ್ರಮ ಕಾನೂನುಬಾಹಿರವಾಗಿದೆ


ರಾಯಚೂರು : ಕರ್ನಾಟಕ ಉದ್ಯೋಗ ಮಿತ್ರ ಇಲಾಖೆಯಿಂದ ಕಾಲು ಎಕರೆ,ಅರ್ಧ ಎಕರೆ ಒಂದು ಎಕರೆ ಇಂಡಸ್ಟ್ರೀಯಲ್ ಜಮೀನನ್ನು ಅನುಮೋದನೆಗೊಳಿಸುತ್ತಿರುವ ಜಿಲ್ಲಾಧಿಕಾರಿಗಳ ಕ್ರಮ ಕಾನೂನುಬಾಹಿರವಾಗಿದ್ದು ಇದರಲ್ಲಿ ಅವ್ಯವಹಾರ ನಡೆದಿರುವಂತೆ ಕಾಣುತ್ತಿದ್ದು ಕೂಡಲೇ ಸಂಬಂಧಪಟ್ಟ ಸಚಿವರು ಕ್ರಮ ಜರುಗಿಸಬೇಕೆಂದು ರಾಯಚೂರು ಕಾಟನ್ ಮಿಲ್ಲರ್ಸ್ ಅಸೋಷಿಯೇಶನ್ ಅಧ್ಯಕ್ಷ ವಿ.ಲಕ್ಷ್ಮೀ ರೆಡ್ಡಿ ಒತ್ತಾಯಿಸಿದರು.

ಈ ವಿಚಾರವಾಗಿ ವಾಣಿಜ್ಯೋದ್ಯಮ ಸಂಘ ಧ್ವನಿ ಎತ್ತಬೇಕಾಗಿತ್ತು ಆದರೆ ಆ ಸಂಘ ಎಲ್ಲಿದೆಯೋ ಆ ಸಂಘದ ಸದಸ್ಯರಿಗೆ ಯಾವಾಗ ಬುದ್ದಿ ಕೊಡುತ್ತಾನೋ ಎಂದು ಟೀಕಿಸಿದ ಅವರು, ಇತ್ತೀಚಿಗೆ ನಮ್ಮ ಸಂಘದ ವತಿಯಿಂದ ಕೆಐಡಿಬಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಏಕಗವಾಕ್ಷಿ ಸಭೆಯಲ್ಲಿ ಕರ್ನಾಟಕ ಉದ್ಯೋಗ ಮಿತ್ರ ಇಲಾಖೆಯಿಂದ ಹಂಚಿಕೆ ಮಾಡಿರುವ 1/4 ಎಕರೆ, 1/2 ಎಕರೆ ಹಾಗೂ 1 ಎಕರೆ ಇಂಡಸ್ಟ್ರೀಯಲ್ ಜಮೀನುಗಳಿಗೆ ನೀಡಿರುವ ಅನುಮೋದನೆ ರದ್ದುಪಡಿಸಿ ಎಸ್.ಸಿ/ಎಸ್.ಟಿ ಜನಾಂಗಕ್ಕೆ ಸಣ್ಣ ಉದ್ದಿಮೆದಾರರಿಗೆ ಹಂಚಿಕೆ ಮಾಡಬೇಕೆಂದು ಕೋರಿದ್ದೇವೆ ಎಂದು ಹೇಳಿದರು.

ಸರ್ವೇ ನಂ. 142 ಮತ್ತು 145 ಕ್ಕೆ ಸಂಬಂಧಿಸಿದಂತೆ ಜಮೀನು ಕೆಐಎಡಿಬಿಗೆ ಸಂಬಂಧಪಟ್ಟದ್ದಾಗಿದ್ದು 18 ಎಕರೆ ಜಮೀನಿನಲ್ಲಿ ಸಣ್ಣ ಉದ್ದಿಮೆದಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಕೋರಿದ ಅವರು ನಮ್ಮ ರಾಯಚೂರು ನಗರಕ್ಕೆ ಈವರೆಗೂ ಬಂದಿಲ್ಲದಿರುವುದು ಈ ಪ್ರದೇಶದಲ್ಲಿ ಕೈಗಾರಿಕೆಗಳು ಹಿಂದುಳಿಯುವುದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಟೀಕಿಸಿದರು.

ಹತ್ತಿ ಬೆಳೆಯುವುದರಲ್ಲಿ ಹಾಗೂ ರಾಜ್ಯದಲ್ಲಿ ಅತಿ ಹೆಚ್ಚು ಜಿಎಸ್‌ಟಿ ಪಾವತಿಸುವುದರಲ್ಲಿ ಮುಂಚೂಣಿಯಲ್ಲಿರುವ ರಾಯಚೂರು ಪ್ರದೇಶವನ್ನು ಕೈಗಾರಿಕೆ ವಿಚಾರದಲ್ಲಿ ಉದಾಸೀನ ಮಾಡುವ ರಾಜ್ಯ ಸರಕಾರದ ಕ್ರಮ ಸಮರ್ಪಕವಾಗಿಲ್ಲ. ಇಲ್ಲಿನ ಹಾಲಿ ಹಾಗೂ ಮಾಜಿ ಶಾಸಕರು ರಾಜಕೀಯ ಇಚ್ಚಾಶಕ್ತಿಯನ್ನು ಪ್ರದರ್ಶಿಸಿದರೆ ಟೆಕ್ಸ್ಟೈಲ್ಸ್ ಪಾರ್ಕ್ ರಾಯಚೂರಿನಲ್ಲಾಗುವುದು ಶತಸಿದ್ದ ಎಂದು ಹೇಳಿದರು.
ಈಗಾಗಲೇ ಬಟ್ಟೆ ಹಾಗೂ ಸ್ಪಿನ್ನಿಂಗ ಮಿಲ್‌ಗಳ ಬಂಡವಾಳದಾರರಿಗೆ ರಾಯಚೂರಿನಲ್ಲಿ 12 ರಿಂದ 15 ಲಕ್ಷ ಹತ್ತಿ ಬೇಲ್ ಉತ್ಪಾದನೆ ಮಾಡುವ ವಿಚಾರವನ್ನು ಗಮನ ತಂದಿರುವುದರಿಂದ ಅವರು ರಾಯಚೂರು ಭಾಗಕ್ಕೆ ಭೇಟಿ ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಹೀಗೆ ಕೈಗಾರಿಕೆ ಬೆಳವಣಿಗೆಗೆ ಪೂರಕ ವಾತಾವರಣವಿದ್ದು ಪಕ್ಷ ಭೇದ ಮರೆತು ಇಲ್ಲಿನ ರಾಜಕಾರಣಿಗಳು ರಾಯಚೂರು ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಬೇಕು. ಕೈಗಾರಿಕೆ ಪ್ರದೇಶದ ಜಮೀನುಗಳನ್ನು ಕಾನೂನು ಪ್ರಕಾರ ಹಂಚಿಕೆ ಮಾಡಬೇಕಾಗಿದ್ದು ಬೇಕಾಬಿಟ್ಟಿ ಹಂಚಿಕೆ ಮಾಡಿ ಅವ್ಯವಹಾರದಲ್ಲಿ ತೊಡಗುವುದನ್ನು ಕೈ ಬಿಡಬೇಕು. ಇಲ್ಲದೆ ಹೋದರೆ ಕೆಲವೇ ದಿನಗಳಲ್ಲಿ ಲೋಕಾಯುಕ್ತಕ್ಕೆ ಎಲ್ಲ ದಾಖಲಾತಿಗಳನ್ನು ಸಲ್ಲಿಸಿ ಕಾನೂನು ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.


[ays_poll id=3]