K2kannadanews.in
Murder case ರಾಯಚೂರು : ಮನೆ ಖಾಲಿ ಮಾಡಿ ಎಂದಿದ್ದಕ್ಕೆ ಬಾಡಿಗೆದಾರನೊಬ್ಬ ಮನೆಯೊಡತಿಯನ್ನೇ ಹತ್ಯೆ ಮಾಡಿ. ಚಿನ್ನಭರಣ ಮೊಬೈಲ್ ಕದ್ದೊಯ್ದು ಸಿಕ್ಕಿಬಿದ್ದ ಘಟನೆ ರಾಯಚೂರು ನಿವಾಸಿಗಳನ್ನು ಬೆಚ್ಚಿ ಬೀಳಿಸಿದೆ. ಮನೆ ಮಾಲೀಕರು ಬಾಡಿಗೆ ಕೊಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಲೆ ಮಾಡಿದ ಆರೋಪಿ ಸಿಕ್ಕಿ ಬಿದ್ದಿದ್ದೆ ರೋಚಕ.
ಹೌದು ರಾಯಚೂರು ನಗರದ ಉದಯನಗರ ಬಡಾವಣೆಯಲ್ಲಿ ಘಟನೆ ನಡೆದಿದೆ. ಶೋಭಾ ಪಾಟೀಲ್ (63) ಕೊಲೆಯಾದ ಮಹಿಳೆ. ಶಿವುಸ್ವಾಮಿ ಕೊಲೆ ಮಾಡಿರುವ ಆರೋಪಿ. ಶೋಭಾ ಪಾಟೀಲ್ ಉದಯನಗರದ ನಿವಾಸಿ, ಆದರೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಹಾಗಾಗಿ ಉದಯನಗರದ ತಮ್ಮ ಮನೆಯ ಮಹಡಿಯಲ್ಲಿದ್ದ ರೂಮನ್ನು ಬಾಡಿಗೆಗೆ ನೀಡಿದ್ದರು. ಆಗಾಗ ಉದಯನಗರ ನಿವಾಸಕ್ಕೆ ಶೋಭಾ ಪಾಟೀಲ್ ಬಂದು ಹೋಗುತ್ತಿದ್ದರು. ಕೆಲ ದಿನಗಳ ಹಿಂದೆ ಶೋಭಾ ಪಾಟೀಲ್ ಮನೆ ಖಾಲಿ ಮಾಡುವಂತೆ ಶಿವುಸ್ವಾಮಿಗೆ ಹೇಳಿದ್ದರು. ಅಡ್ವಾನ್ಸ್ ವಿಚಾರವಾಗಿ ಮನೆಯೊಡತಿ ಶೋಭಾ ಹಾಗೂ ಬಾಡಿಗೆದಾರ ಶಿವು ನಡುವೆ ಜಗಳವಾಗಿತ್ತು. ಇದೇ ಸಮಯಕ್ಕೆ ಬೆಂಗಳೂರಿಂದ ಶೋಭಾ ಪಾಟೀಲ್ ರಾಯಚೂರು ಮನೆಗೆ ಬಂದಿದ್ದ ವೇಳೆ ಏಕಾಏಕಿ ಮನೆಗೆ ನುಗ್ಗಿದ್ದ ಶಿವುಸ್ವಾಮಿ, ಶೋಭಾ ಅವರ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಈ ಒಂದು ಘಟನೆ ಯಿಂದ ಬಡಾವಣೆ ನಿವಾಸಿಗಳು ಭಯಭೀತಗೊಂಡಿದ್ದರು.
ಕೊಲೆ ಮಾಡಿದ ಶಿವುಸ್ವಾಮಿ ಖತರ್ನಾಕ್ ಐಡಿಯಾ ಮಾಡಿ ಎಡವಟ್ಟು ಕೂಡ ಮಾಡಿಕೊಂಡ. ಕೊಲೆ ಮಾಡಿದ ಬಳಿಕ ಮನೆಯ ಮಾಲಕಿಯ ಪುತ್ರನಿಗೆ ಕರೆ ಮಾಡಿ ಮನೆಯಲ್ಲಿ ಬಿದ್ದು ನಿಮ್ಮ ತಾಯಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದ. ನಂತರ ಆರೋಪಿಯು ಮಹಿಳೆಯ ಅಂತ್ಯ ಸಂಸ್ಕಾರದಲ್ಲೂ ಪಾಲ್ಗೊಂಡಿದ್ದ. ತಾಯಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದ ಕಾರಣ ಮೃತಪಟ್ಟಿರಬಹುದು ಎಂದು ಮಗ ಚೆನ್ನಬಸವ ಪಾಟೀಲ್ ನಂಬಿದ್ದರು. ಆದರೆ ಆರೋಪಿ ಎಡವಟ್ಟು ಮಾಡಿಕೊಂಡಿದ್ದೆ ಇಲ್ಲಿ. ಕೊಲೆ ಮಾಡಿ ಕೊರಳಲ್ಲಿದ್ದ ಎರಡು ತೊಲೆ ಚಿನ್ನದ ಸರ, ಕಿವಿಯೋಲೆ ಹಾಗೂ ಮೊಬೈಲ್ ಫೋನ್ ಸಹ ತೆಗೆದುಕೊಂಡು ಹೊಗುರುತ್ತಾನೆ. ಶವ ಸಂಸ್ಕಾರದ ನಂತರ ಶೋಭಾ ಅವರ ಮೈಮೇಲಿದ್ದ ಚಿನ್ನಾಭರಣಗಳು ನಾಪತ್ತೆಯಾಗಿದ್ದವು. ಇದರಿಂದ ಅನುಮಾನಗೊಂಡ ಕುಟುಂಬದ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇನ್ನು ತನಿಖೆ ಬಗ್ಗೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ಪುಟ್ಟಮಾದಯ್ಯ ಅವರು ಹೇಳಿದ್ದು ಹೀಗೆ.
ಸದ್ಯದ ಮಟ್ಟಿಗೆ ಹಣ ಬಂಗಾರಕ್ಕಾಗಿ ಕೊಲೆ ನಡೆದಿದೆ ಎಂದು ಪೊಲೀಸರು ಹೇಳುತ್ತಿದ್ದು, ಹೆಚ್ಚಿನ ತನಿಕಗಾಗಿ ನ್ಯಾಯಾಲಯದಿಂದ ಪರವಾನಿಗೆ ತೆಗೆದುಕೊಂಡು, ಶವ ಪರೀಕ್ಷೆ ನಡೆಸಿ ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದು ಹೇಳಿದ್ದು, ಕೊಲೆ ಕೇವಲ ಚಿನ್ನ ಹಣಕ್ಕಾಗಿ ನಡೆದಿಲ್ಲ, ಇನ್ನು ಬಲವಾದ ಕಾರಣ ಇರಬಹುದು ಎಂಬ ಅನುಮಾನಗಳು ಕಾಡುತ್ತಿವೆ. ಒಟ್ಟಾರೆಯಾಗಿ ಪೊಲೀಸ್ ತನಿಖೆಯಿಂದಲೇ ಕೊಲೆಯ ಅಸಲಿ ಸತ್ಯ ಹೊರಬೀಳಬೇಕಿದೆ.