LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಭಾಷೆಗಳು ಕೇವಲ ಸಂವಹನದ ಸಾಧನಗಳಷ್ಟೇ ಅಲ್ಲ : ಜನರ ಭಾವನೆ, ಸಂಸ್ಕೃತಿ ಮತ್ತು ಅಸ್ತಿತ್ವ




ಭಾರತವು ಭಾಷೆಗಳ ವೈವಿಧ್ಯತೆಯ ಸೊಬಗಿನಿಂದ
ಕಂಗೊಳಿಸುವ ದೇಶ. ಇಲ್ಲಿ ಪ್ರತಿಯೊಂದು ಭಾಷೆಯೂ
ಒಂದು ಸಂಸ್ಕೃತಿ, ಒಂದು ಇತಿಹಾಸ, ಒಂದು ಜೀವನದ
ದೃಷ್ಟಿಕೋನವನ್ನು ಒಳಗೊಂಡಿದೆ. ಭಾಷೆಗಳು ಕೇವಲ
ಸಂವಹನದ ಸಾಧನಗಳಷ್ಟೇ ಅಲ್ಲ; ಅವು ಜನರ ಭಾವನೆ,
ಸಂಸ್ಕೃತಿ ಮತ್ತು ಅಸ್ತಿತ್ವದ ಪ್ರತಿರೂಪಗಳಾಗಿವೆ.
ಆದ್ದರಿಂದ ಭಾಷೆಯ ವಿಚಾರದಲ್ಲಿ ನಡೆಯುವ ಯಾವುದೇ
ಚರ್ಚೆಯೂ ಸಮಾಜದಲ್ಲಿ ದೊಡ್ಡ ಪ್ರತಿಧ್ವನಿಯನ್ನು
ಉಂಟುಮಾಡುವುದು ಸಹಜ.

https://youtu.be/bv1-fPrnPtY?si=kX1aX39aq2g4y9Jd

ಇತ್ತೀಚಿನ ವರ್ಷಗಳಲ್ಲಿ ಪದೇಪದೇ ಕೇಳಿಬರುವ “ಹಿಂದಿ ಹೇರಿಕೆ” ಎಂಬ ವಿಚಾರ ಮತ್ತೆ ಮತ್ತೆ ಚರ್ಚೆಗೆ ಬರುತ್ತಿದೆ. ಟಿವಿ ಚಾನೆಲ್‌ಗಳು, ಪತ್ರಿಕೆಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯದ ಕುರಿತು ಅನೇಕ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಈ ಚರ್ಚೆಗಳು ಸಾಮಾನ್ಯ ಜನರಿಗಷ್ಟೇ ಅಲ್ಲದೆ ಶಿಕ್ಷಣ ಕ್ಷೇತ್ರದಲ್ಲಿರುವ ಶಿಕ್ಷಕರಿಗೂ, ವಿದ್ಯಾರ್ಥಿಗಳಿಗೂ ಗೊಂದಲವನ್ನು ಉಂಟುಮಾಡುತ್ತಿವೆ.

ವಿಶೇಷವಾಗಿ ಹಿಂದಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಈ ಪರಿಸ್ಥಿತಿ ಹೆಚ್ಚು ಆತಂಕಕಾರಿ. ಏಕೆಂದರೆ ಒಂದು ಭಾಷೆಯ ಕುರಿತು ವಿವಾದಾತ್ಮಕ ಚರ್ಚೆಗಳು ನಡೆಯುವಾಗ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಆ ಭಾಷೆಯ ಬಗ್ಗೆ ಅಸಮಾಧಾನ ಅಥವಾ ದೂರಾವಸ್ಥೆ ಮೂಡುವ ಸಾಧ್ಯತೆ ಇರುತ್ತದೆ. ಭಾಷೆ ಕಲಿಯುವುದು ಎಂದರೆ ಅದು ಕೇವಲ ಪಾಠ್ಯ ವಿಷಯವಲ್ಲ... ಅದು ಒಂದು ಸಂಸ್ಕೃತಿಯ ಪರಿಚಯ. ಆದರೆ ವಿದ್ಯಾರ್ಥಿಗಳು “ಇದು ಒತ್ತಾಯದಿಂದ ಕಲಿಯಬೇಕಾದ ವಿಷಯವೇ?” ಎಂಬ ಪ್ರಶ್ನೆಯನ್ನು ಕೇಳಲು ಪ್ರಾರಂಭಿಸಿದಾಗ ಅವರ ಆಸಕ್ತಿ ಕುಗ್ಗುವುದು ಸಹಜ.

ಶಿಕ್ಷಣದ ಮೂಲ ಉದ್ದೇಶವೇ ಮಕ್ಕಳಲ್ಲಿ ಜ್ಞಾನಾಭಿಲಾಷೆ ಮತ್ತು ಕುತೂಹಲವನ್ನು ಬೆಳಸುವುದು. ಭಾಷೆಗಳನ್ನು ಕಲಿಸುವುದು ಕೂಡ ಇದೇ ಉದ್ದೇಶದಿಂದ ಆಗಬೇಕು. ಒಂದು ಭಾಷೆಯನ್ನು ಮಕ್ಕಳಿಗೆ ಪ್ರೀತಿಯಿಂದ ಪರಿಚಯಿಸಿದಾಗ ಅವರು ಅದನ್ನು ಆಸಕ್ತಿಯಿಂದ ಕಲಿಯುತ್ತಾರೆ. ಆದರೆ ರಾಜಕೀಯ ಚರ್ಚೆಗಳು ಮತ್ತು ತುರ್ತು ನಿರ್ಣಯಗಳು ಈ ಪ್ರಕ್ರಿಯೆಗೆ ಅಡ್ಡಿಯಾಗುವ ಸಾಧ್ಯತೆ ಇದೆ.

ಇಲ್ಲಿ ಮೂರು ಭಾಷಾ ಸೂತ್ರ ಎಂಬ ಕಲ್ಪನೆಯನ್ನೂ ಗಮನಿಸಬೇಕು. ಈ ವ್ಯವಸ್ಥೆಯ ಉದ್ದೇಶವೇ ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯ ಜೊತೆಗೆ ಇನ್ನೊಂದು ಅಥವಾ ಎರಡು ಭಾಷೆಗಳನ್ನೂ ಕಲಿಯುವ ಮೂಲಕ ವಿಶಾಲವಾದ ಸಂವಹನ ಸಾಮರ್ಥ್ಯವನ್ನು ಪಡೆಯಬೇಕು ಎಂಬುದು. ಮಾತೃಭಾಷೆ ವ್ಯಕ್ತಿಯ ಅಸ್ತಿತ್ವದ ಮೂಲವಾಗಿದ್ದರೆ, ಇತರ ಭಾಷೆಗಳು ಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಸಹಾಯಕವಾಗುತ್ತವೆ.
ಆದರೆ ಈ ವ್ಯವಸ್ಥೆಯ ಬಗ್ಗೆ ನಡೆಯುವ ಚರ್ಚೆಗಳು ಕೆಲವೊಮ್ಮೆ ಭಾಷೆಯ ವಿರೋಧ ಅಥವಾ ಬೆಂಬಲ ಎಂಬ ಎರಡು ತುದಿಗಳ ನಡುವೆ ಸಿಕ್ಕಿ ಹಾಕಿಕೊಳ್ಳುತ್ತವೆ. ಪರಿಣಾಮವಾಗಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಭಾಷೆಯ ಬಗ್ಗೆ ಗೊಂದಲ ಮೂಡುತ್ತದೆ. “ಯಾವ ಭಾಷೆ ಕಲಿಯಬೇಕು? ಯಾವುದು ಬೇಡ?” ಎಂಬ ಪ್ರಶ್ನೆಗಳು ಮೂಡುತ್ತವೆ. ಇದು ಶಿಕ್ಷಣದ ಆರೋಗ್ಯಕರ ವಾತಾವರಣಕ್ಕೆ ಸಹಾಯಕವಾಗುವುದಿಲ್ಲ.

ಇನ್ನೊಂದು ಮಹತ್ವದ ಸಂಗತಿ ಎಂದರೆ, ನಮ್ಮ ರಾಜ್ಯದ ಹೊರಗಿನ ಹಲವಾರು ರಾಜ್ಯಗಳಲ್ಲಿ ಕನ್ನಡ ಭಾಷೆಯನ್ನೂ ತೃತೀಯ ಭಾಷೆಯಾಗಿ ಕಲಿಸಲಾಗುತ್ತಿದೆ. ಅಲ್ಲಿ ಕನ್ನಡ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡದ ಬಗ್ಗೆ ಗೌರವ ಮೂಡುವಂತೆ ನಾವು ಪ್ರಯತ್ನಿಸಬೇಕು. ನಾವು ಇತರ ಭಾಷೆಗಳ ಬಗ್ಗೆ ಗೌರವ ತೋರಿಸಿದಾಗ ಮಾತ್ರ ನಮ್ಮ ಭಾಷೆಗೆ ಸಹಜವಾಗಿ ಗೌರವ ಸಿಗುತ್ತದೆ. ಭಾಷೆಗಳ ನಡುವಿನ ಸಂಬಂಧ ಸ್ಪರ್ಧೆಯಲ್ಲ.. ಅದು ಸಹಕಾರದ ಸಂಬಂಧ.

ಇಂದಿನ ಜಾಗತಿಕ ಯುಗದಲ್ಲಿ ಬಹುಭಾಷಾ ಜ್ಞಾನವು ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿದೆ. ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಬೇರೆ ರಾಜ್ಯಗಳಿಗೆ ಅಥವಾ ದೇಶಗಳಿಗೆ ಹೋಗುತ್ತಾರೆ. ಅಲ್ಲಿ ಸ್ಥಳೀಯ ಭಾಷೆಯ ಅರಿವು ಇದ್ದರೆ ಅವರು ಸುಲಭವಾಗಿ ಹೊಂದಿಕೊಳ್ಳಬಹುದು. ಉದಾಹರಣೆಗೆ, ಕರ್ನಾಟಕದ ವಿದ್ಯಾರ್ಥಿಗಳು ಉತ್ತರ ಭಾರತದ ವಿಶ್ವವಿದ್ಯಾಲಯಗಳಿಗೆ ಹೋದಾಗ ಹಿಂದಿ ತಿಳಿದಿದ್ದರೆ ಅವರ ಜೀವನ ಸುಲಭವಾಗುತ್ತದೆ. ಇದೇ ರೀತಿ ಉತ್ತರ ಭಾರತದ ವಿದ್ಯಾರ್ಥಿಗಳು ಕರ್ನಾಟಕಕ್ಕೆ ಬಂದಾಗ ಕನ್ನಡ ತಿಳಿದಿದ್ದರೆ ಅವರು ಇಲ್ಲಿ ಸಮಾಜದೊಂದಿಗೆ ಬೆರೆತು ಹೋಗಲು ಸಾಧ್ಯವಾಗುತ್ತದೆ.
ಹೀಗಾಗಿ ಭಾಷೆಗಳನ್ನು ಕಲಿಯುವುದನ್ನು “ಹೇರಿಕೆ” ಅಥವಾ “ವಿರೋಧ” ಎಂಬ ದೃಷ್ಟಿಯಿಂದ ನೋಡುವುದಕ್ಕಿಂತ, ಅದನ್ನು ಜ್ಞಾನ ಮತ್ತು ಸಂವಹನದ ಸಾಧನವಾಗಿ ನೋಡಬೇಕು.
ಭಾಷೆಯ ಮೂಲಕ ನಾವು ಬೇರೆ ಸಂಸ್ಕೃತಿಗಳನ್ನು ಅರಿಯಬಹುದು, ಹೊಸ ಸ್ನೇಹಗಳನ್ನು ಬೆಳೆಸಬಹುದು ಮತ್ತು ಜಗತ್ತಿನೊಂದಿಗೆ ಸಂಪರ್ಕ ಸಾಧಿಸಬಹುದು.

ಇತ್ತೀಚೆಗೆ ಶಿಕ್ಷಣ ವ್ಯವಸ್ಥೆಯಲ್ಲಿ “ಗ್ರೇಡ್” ಎಂಬ ಪದಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಆದರೆ ಭಾಷೆಯ ಸೌಂದರ್ಯವನ್ನು ಅಂಕಗಳಿಂದ ಅಥವಾ ಗ್ರೇಡ್‌ಗಳಿಂದ ಅಳೆಯಲು ಸಾಧ್ಯವಿಲ್ಲ. ಭಾಷೆ ಎಂದರೆ ಕೇವಲ ವ್ಯಾಕರಣ ಅಥವಾ ಪಾಠ ಪುಸ್ತಕವಲ್ಲ. ಅದು ಕಥೆಗಳು, ಕವಿತೆಗಳು, ನುಡಿಗಟ್ಟುಗಳು, ಜನಪದ ಸಾಹಿತ್ಯ ಮತ್ತು ಸಂಸ್ಕೃತಿಯ ಸಮಗ್ರ ರೂಪವಾಗಿದೆ. ವಿದ್ಯಾರ್ಥಿಗಳು ಭಾಷೆಯ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಅರಿಯುವಾಗ ಮಾತ್ರ ಆ ಭಾಷೆಯ ಮೇಲಿನ ಪ್ರೀತಿ ಮೂಡುತ್ತದೆ. ಆದ್ದರಿಂದ ಶಿಕ್ಷಕರ ಪಾತ್ರ ಇಲ್ಲಿ ಅತ್ಯಂತ ಮಹತ್ವದ್ದಾಗಿದೆ. ಒಬ್ಬ ಶಿಕ್ಷಕನು ವಿದ್ಯಾರ್ಥಿಗಳಿಗೆ ಭಾಷೆಯನ್ನು ಕೇವಲ ಪಾಠವಾಗಿ ಅಲ್ಲದೆ ಒಂದು ಜೀವನಾನುಭವವಾಗಿ ಪರಿಚಯಿಸಿದಾಗ, ಆ ವಿದ್ಯಾರ್ಥಿ ಆ ಭಾಷೆಯನ್ನು ಪ್ರೀತಿಯಿಂದ ಕಲಿಯಲು ಪ್ರಾರಂಭಿಸುತ್ತಾನೆ.

ಭಾಷೆಯನ್ನು ಕಲಿಸುವಲ್ಲಿ ಪ್ರೇರಣೆ, ಸಂವಾದ ಮತ್ತು ಸೃಜನಾತ್ಮಕತೆ ಅಗತ್ಯ. “ಭಾಷೆ ಎಂಬುದು ಆಜ್ಞೆಯಿಂದ ಬೆಳೆಯುವುದಿಲ್ಲ...ಅದು ಪ್ರೀತಿ, ಗೌರವ ಮತ್ತು ಅನುಭವದಿಂದ ಅರಳುತ್ತದೆ.” ಸರ್ಕಾರ ಮತ್ತು ಶಿಕ್ಷಣ ಸಚಿವರು ಭಾಷೆಯ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ... ಭಾಷಾ ತಜ್ಞರ, ನೀತಿ ನಿರ್ಮಾಪಕರ, ಚಿಂತಕರ, ಸಾಹಿತಿಗಳ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರ, ನುರಿತ ಶಿಕ್ಷಕರ ರೊಂದಿಗೆ ಶಿಕ್ಷಣ ಕ್ಷೇತ್ರದ ವಾಸ್ತವಿಕತೆಯನ್ನು ಗಮನಿಸಬೇಕು. ಶಿಕ್ಷಕರ ಅನುಭವ, ವಿದ್ಯಾರ್ಥಿಗಳ ಆಸಕ್ತಿ ಮತ್ತು ಸಮಾಜದ ಮನೋಭಾವನೆ—ಈ ಎಲ್ಲಾ ವಿಚಾರಗಳನ್ನು ಸಮಗ್ರವಾಗಿ ಪರಿಗಣಿಸಬೇಕು ಏಕೆಂದರೆ ಭಾಷೆಯ ವಿಷಯವು ಕೇವಲ ಆಡಳಿತದ ವಿಷಯವಲ್ಲ... ಅದು ಜನರ ಭಾವನೆಯ ವಿಷಯ.

ಭಾರತದ ಬಹುಭಾಷಾ ಸಂಸ್ಕೃತಿ ನಮ್ಮ ದೇಶದ ಅತ್ಯಂತ ದೊಡ್ಡ ಶಕ್ತಿ. ಕನ್ನಡ, ಹಿಂದಿ, ತಮಿಳು, ತೆಲುಗು, ಮರಾಠಿ, ಬಂಗಾಳಿ—ಪ್ರತಿಯೊಂದು ಭಾಷೆಯೂ ಭಾರತೀಯ ಸಂಸ್ಕೃತಿಯ ಒಂದು ಅಮೂಲ್ಯ ರತ್ನವಾಗಿದೆ. ಈ ರತ್ನಗಳನ್ನು ನಾವು ಪರಸ್ಪರ ಗೌರವದಿಂದ ಕಾಪಾಡಿಕೊಳ್ಳಬೇಕು.
ಕೊನೆಯಲ್ಲಿ ಒಂದು ಮಾತು ನೆನಪಿಸಿಕೊಳ್ಳಬೇಕು....
ಮಾತೃಭಾಷೆ ನಮ್ಮ ಆತ್ಮವಾಗಿದ್ದರೆ, ಇತರ ಭಾಷೆಗಳು ನಮ್ಮ ಜ್ಞಾನದ ಕಿಟಕಿಗಳಾಗಿವೆ. ಈ ಕಿಟಕಿಗಳನ್ನು ಮುಚ್ಚುವುದರಿಂದ ಜಗತ್ತು ಚಿಕ್ಕದಾಗುತ್ತದೆ ಆದರೆ ಅವನ್ನು ತೆರೆಯುವುದರಿಂದ ನಮ್ಮ ದೃಷ್ಟಿ ವಿಶಾಲವಾಗುತ್ತದೆ.
ಆದ್ದರಿಂದ ಭಾಷೆಯ ಬಗ್ಗೆ ನಡೆಯುವ ಚರ್ಚೆಗಳಲ್ಲಿ ಭಾವನಾತ್ಮಕ ಸಮತೋಲನ ಮತ್ತು ಪರಸ್ಪರ ಗೌರವ ಅತ್ಯಂತ ಅಗತ್ಯ. ವಿದ್ಯಾರ್ಥಿಗಳಿಗೆ ಪ್ರತಿಯೊಂದು ಭಾಷೆಯನ್ನು ಪ್ರೀತಿಯಿಂದ ಕಲಿಯುವ ಅವಕಾಶ ನೀಡಿದಾಗ ಅವರು ತಮ್ಮ ಮಾತೃಭಾಷೆಯನ್ನು ಇನ್ನಷ್ಟು ಗೌರವಿಸುತ್ತಾರೆ ಮತ್ತು ಇತರ ಭಾಷೆಗಳ ಸೌಂದರ್ಯವನ್ನೂ ಅರಿಯುತ್ತಾರೆ.

ಭಾಷೆ ಎಂದರೆ ಗಡಿಯಲ್ಲ ಅದು ಹೃದಯಗಳನ್ನು ಜೋಡಿಸುವ ಸೇತುವೆ.
ಈ ಸತ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಾವು ಮುಂದಿನ ಪೀಳಿಗೆಗೆ ಬಹುಭಾಷಾ ಜ್ಞಾನದ ಸಮೃದ್ಧ ಪರಂಪರೆಯನ್ನು ನೀಡಬೇಕು ಎನ್ನುವುದು ನನ್ನ ಅಭಿಪ್ರಾಯ.

- ಡಾ ಅರುಣಾ ಹಿರೇಮಠ
ಮುಖ್ಯಸ್ಥರು, ಹಿಂದಿ ವಿಭಾಗ, ಎಲ್ ವಿ ಡಿ ಮಹಾವಿದ್ಯಾಲಯ, ರಾಯಚೂರು.
 
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST