ಈ ಭಾಗದ ಹೋರಾಟ, ಬದುಕಿಗೆ ಮಾಧ್ಯಮಗಳು ಧ್ವನಿಯಾಗಿರುವುದು ಸ್ಫೂರ್ತಿ
![]() |
![]() |
![]() |
![]() |
![]() |
ಲಿಗಸುಗೂರು: 371 (ಜೆ ) ಸಂಪೂರ್ಣ ಫಲ ಸಿಗುತ್ತಿಲ್ಲ. ಸರ್ಕಾರ ಮೀನಾಮೇಷಗಳನ್ನು ಎಣಿಸದೆ ಜನರ ಜೀವನ ಮಟ್ಟವನ್ನು ಹೆಚ್ಚಿಸುವ ಕ್ರಿಯಾಶೀಲತೆಯನ್ನು ತೋರಿಸಬೇಕಾಗಿದೆ. ಜಿಲ್ಲೆಗಳಲ್ಲಿ ಅನೇಕ ಸಮಸ್ಯೆಗಳಿವೆ. ಸಾಕಷ್ಟು ಸಂಪನ್ಮೂಲಗಳಿದ್ದರೂ ಅವುಗಳ ಲಾಭ ಬೇರೆ ಜನ ಪಡೆದುಕೊಳ್ಳುತ್ತಿದ್ದಾರೆ. ಈ ಭಾಗದ ಎಲ್ಲ ಹೋರಾಟಗಳ ಬದುಕಿಗೆ ಮಾಧ್ಯಮಗಳು ಧ್ವನಿಯಾಗಿ ನಿಲ್ಲುತ್ತಿರುವುದು ನಮಗೆ ಸ್ಫೂರ್ತಿಯಾಗಿದೆ ಎಂದು ಸಾಹಿತಿ ವೀರಹನುಮಾನ ಹೇಳಿದರು.
ಜಿಲ್ಲೆಯಲ್ಲಿ ಸಮೃದ್ಧ ಸಂಪನ್ಮೂಲಗಳಿವೆ. ಎರಡು ನದಿಗಳು ಹರಿಯುತ್ತಿವೆ. ಆದರೂ ನೀರಿನ ದಾಹ ತೀರಿಸಲಾಗುತ್ತಿಲ್ಲ. ಏರುತ್ತಿರುವ ಬಿಸಿಲಿನ ತಾಪವಿದೆ, ಬತ್ತಿದ ಕೆರೆಗಳು , ಬಡತನ , ದಾರಿದ್ರ್ಯ ನಮ್ಮ ಜೊತೆಯಲ್ಲಿಯೇ ನೆಲೆಯಾಗಿವೆ. ಕೃಷಿಗೆ ಅದರಲ್ಲೂ ಹತ್ತಿ , ಭತ್ತಕ್ಕೆ ಹೆಸರಾದ ನಮ್ಮ ಜಿಲ್ಲೆ ಆ ಹೆಸರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿಲ್ಲ. ರೈತರ ಬಾಳನ್ನು ಹಸನು ಮಾಡುವ , ಆತ ಹೆಮ್ಮೆಯಿಂದ ಬಾಳುವ ಪರಿಸ್ಥಿತಿ ನಿರ್ಮಾಣವಾಗಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು. ಜಿಲ್ಲೆಯ ಕೃಷಿ ಹಾಗೂ ಕೈಗಾರಿಕೆಗಳ ಬೆಳವಣಿಗೆಗೆ ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ.
ನಮ್ಮಲ್ಲಿ ಚಿನ್ನ , ಗ್ರಾನೈಟ್ , ಸುಣ್ಣ , ಬೆಣಚುಗಳು ಸಮೃದ್ಧ ಉಸುಕು ಇವೆಲ್ಲವೂ ನೈಸರ್ಗಿಕವಾಗಿ ನಮಗೆ ದೊರೆತಿರುವ ಸಂಪತ್ತು. ಇವುಗಳನ್ನು ಸದುಪಯೋಗ ಮಾಡಿಕೊಂಡಲ್ಲಿ ನಮಗೆ ನಿರುದ್ಯೋಗ ಸಮಸ್ಯೆ ಇರುವುದಿಲ್ಲ. ಕೃಷಿ ಅವಲಂಬಿತ ಉದ್ದಿಮೆಗಳು ಅಭಿವೃದ್ಧಿ ಆಗಬೇಕಾಗಿದೆ. ನಮ್ಮ ಉತ್ಪನ್ನಗಳಿಗೆ ಹಿಂದೆ ಇದ್ದ ಬೇಡಿಕೆಯನ್ನು ಮತ್ತೆ ಮರು ಸ್ಥಾಪಿಸಬೇಕಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಜನ ಜಾತ್ರೆಯಂತೆ ಸೇರುತ್ತಾರೆ. ಅವು ಉತ್ಸವಗಳಾಗಿವೆ , ಜಾತ್ರೆಗಳಾಗಿವೆ ಎಂಬ ಟೀಕೆಗಳಿವೆ. ಈ ಟೀಕೆಗಳು ಬರಬಾರದು ಎಂದರೆ ಸಮ್ಮೇಳನ ನಾಡಿನ ಚಿಂತಕರೊಂದಿಗೆ ಸೇರುವ ಜನಸಮುದಾಯಕ್ಕೆ ನಾಡು ನುಡಿಯ ಬಗ್ಗೆ, ಕನ್ನಡ ಸಂಸ್ಕೃತಿಯ ಬಗ್ಗೆ, ಕನ್ನಡ ಜ್ಞಾನದ ಬಗ್ಗೆ ಉಪನ್ಯಾಸಗಳು ಮಾಡಿದರೆ ಸಾಲದು.
ನೆಲ – ಜಲ , ನಾಡು – ನುಡಿಯ ನಾಡವರ ಸಂಕಟಗಳೇನು? ಕಾರಣಗಳೇನು? ಅವುಗಳಿಗೆ ಪರಿಹಾರವೇನು? ಅದರಲ್ಲಿ ನಮ್ಮ ಜವಾಬ್ದಾರಿ ಏನೆಂಬುದನ್ನು ಮನದಟ್ಟು ಮಾಡಬೇಕಾಗಿದೆ ಎಂದು ತಿಳಿಸಿದರು. ಪರಿಷತ್ತು ಇದರಲ್ಲಿ ಈಗಾಗಲೇ ಯಶಸ್ಸನ್ನು ಸಾಧಿಸುವ ಪ್ರಯತ್ನ ಮಾಡುತ್ತಿದೆ. ಇದು ಕನ್ನಡ ಜನಕ್ಕೆ ಒಂದು ಸಮಾಧಾನವನ್ನುಂಟು ಮಾಡುತ್ತಿದೆ. ಲಿಂಗಸೂಗೂರಿನಲ್ಲಿ ನಡೆಯುತ್ತಿರುವ ಈ ಸಮ್ಮೇಳನವು ಅದೇ ಆಶಯದಲ್ಲಿ ನಡೆಯುತ್ತಿದೆ ಎಂದರು.
![]() |
![]() |
![]() |
![]() |
![]() |