ನಮ್ಮ ಭಾಷೆ, ನೆಲ, ಜಲ ಕಾಪಾಡುವುದು ನಮ್ಮ ಕರ್ತವ್ಯ
![]() |
![]() |
![]() |
![]() |
![]() |
K2 ನ್ಯೂಸ್ ಡೆಸ್ಕ್ : ನಮ್ಮ ಭಾಷೆ, ನೆಲ, ಜಲ ಕಾಪಾಡುವುದು ನಮ್ಮ ಕರ್ತವ್ಯ. ನಮ್ಮ ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಮಹಾರಾಷ್ಟ್ರದ ನಿರ್ಣಯವನ್ನು ಕಾಂಗ್ರೆಸ್ ಪಕ್ಷ ಹಾಗೂ ಇಡೀ ಕರ್ನಾಟಕ ತೀವ್ರವಾಗಿ ಖಂಡಿಸಿ ವಿರೋಧಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಬೆಳಗಾವಿ ಸುವರ್ಣಸೌಧದ ಬಳಿ ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು. ನಮ್ಮ ರಾಜ್ಯದ ಒಂದೂ ಹಳ್ಳಿಯನ್ನು ಮಹಾರಾಷ್ಟ್ರಕ್ಕೆ ನೀಡಲು ನಾವು ತಯಾರಿಲ್ಲ. ಅವರ ಒಂದು ಹಳ್ಳಿಯೂ ನಮಗೆ ಬೇಡ. ಎರಡೂ ರಾಜ್ಯಗಳ ಗಡಿ ಅಂತಿಮವಾಗಿದ್ದು, ನಮ್ಮ ಜನ ಅದರಂತೆ ಬದುಕುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ಕುತಂತ್ರದಿಂದ ಅಲ್ಲಿನ ಸಚಿವರು ಇದನ್ನು ಆರಂಭಿಸಿದ್ದು, ಈಗ ಎಲ್ಲಾ ಪಕ್ಷದವರು ಇದಕ್ಕೆ ಸೇರಿಕೊಂಡಿದ್ದಾರೆ. ನಾವೆಲ್ಲರೂ ಒಗ್ಗಟ್ಟಿನಿಂದ ನಮ್ಮ ರಾಜ್ಯವನ್ನು ಕಾಪಾಡಬೇಕು. ನಮ್ಮ ಪಕ್ಷ ಮುಂದಾಳತ್ವ ತೆಗೆದುಕೊಳ್ಳಲಿದೆ. ನಮ್ಮ ಭಾಷೆ, ನೆಲ, ಜಲ ಕಾಪಾಡುವುದು ನಮ್ಮ ಕರ್ತವ್ಯ. ಇದಕ್ಕೆ ಅಗತ್ಯ ಸಹಕಾರ ನೀಡಲು ನಾವು ಸಿದ್ಧ ಎಂದು ಹೇಳಿದರು.
ಮಹಾರಾಷ್ಟ್ರದ ತೀರ್ಮಾನಕ್ಕೆ ನಮ್ಮ ವಿರೋಧವಿದೆ. ಸದನದಲ್ಲಿ ನಾವು ಈ ವಿಚಾರವನ್ನು ಪ್ರಸ್ತಾಪ ಮಾಡುತ್ತೇವೆ. ಇದು ಅಶಾಂತಿ ಮೂಡಿಸಲು ಬಿಜೆಪಿ ಉದ್ದೇಶಪೂರ್ವಕವಾಗಿ ಆಡುತ್ತಿರುವ ನಾಟಕ. ಇಲ್ಲಿನ ಜನರ ಭಾವನೆ ಕೆದಕಿ, ಅವರ ಬದುಕಿನಲ್ಲಿ ದ್ವೇಷ ಹಾಗೂ ಅಸೂಯೆ ಮೂಡಿಸುವ ಪ್ರಯತ್ನ ಇದಾಗಿದೆ. ಎಲ್ಲ ಕನ್ನಡಪರ ಸಂಘಟನೆಗಳು ಒಟ್ಟಾಗಿ ಯಾವುದೇ ಅಳುಕಿಲ್ಲದೆ ಇದನ್ನು ಪ್ರತಿಭಟಿಸೋಣ, ರಾಜ್ಯದ ಗೌರವ ಉಳಿಸಿಕೊಳ್ಳೋಣ ಎಂದರು.
ಕೇಂದ್ರದಲ್ಲಿ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದೆ. ಚುನಾವಣೆ ಸಮಯದಲ್ಲಿ ಇವರ ರಾಜಕೀಯ ಹಿತಾಸಕ್ತಿಗಾಗಿ ಇದಕ್ಕೆ ಕುಮ್ಮಕ್ಕು ನೀಡಿದ್ದಾರೆ. ರಾಜ್ಯದಲ್ಲಿರುವ ಮರಾಠಿ ಭಾಷಿಗರೂ ನಮ್ಮವರೇ. ಎಲ್ಲರೂ ಶಾಂತಿಯುತವಾಗಿ ಬದುಕಲು ಬಯಸುತ್ತಾರೆ. ಈ ಭಾಗದ ಜನರ ಹಕ್ಕು, ಹಿತಾಸಕ್ತಿ ಕಾಪಾಡಲು ಇಲ್ಲಿ ಸುವರ್ಣಸೌಧ ನಿರ್ಮಾಣ ಮಾಡಲಾಗಿದೆ. ಮಹಾರಾಷ್ಟ್ರ ಸರ್ಕಾರದ ಇಂತಹ ನಿರ್ಣಯ ನಾಚಿಕೆಗೇಡಿನ ವಿಚಾರವಾಗಿದ್ದು, ನಾವು ಇದನ್ನು ಖಂಡಿಸುತ್ತೇವೆ ಎಂದು ಹೇಳಿದರು
![]() |
![]() |
![]() |
![]() |
![]() |