K2kannadanews.in
Hit and Run Case ಹೈದ್ರಾಬಾದ್ : ಇತ್ತೀಚಿಗೆ ಮೊಬೈಲ್ ಗೀಳು ವಿಪರೀತವಾಗಿದೆ. ಮೊಬೈಲ್ ಒಂದು ಕೈಯಲ್ಲಿದ್ದರೆ ಸಾಕು ನಾವು ಎಲ್ಲಿದ್ದೇವೆ ಎಲ್ಲಿ ನಡೆಯುತ್ತಿದ್ದೇವೆ ಅನ್ನೋದು ಪರಿಜ್ಞಾನವೇ ಇರುವುದಿಲ್ಲ. ಹೀಗೆ ಒಬ್ಬ ವ್ಯಕ್ತಿ ಮೊಬೈಲ್ ನಲ್ಲಿ ಮಗ್ನನಾಗಿ ರಸ್ತೆ ದಾಟುತ್ತಿರುವಾಗ ಕಾರೊಂದು ಡಿಕ್ಕಿ ಹೊಡೆದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಆತ ಎಗರಿ ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆ ಜುಲೈ 14ರಂದು ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೊಡ್ಡು ಗಿರಿ ಬಾಬು (38) ಕಾರು ಅಪಘಾತದಿಂದ ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಜುಲೈ 14ರಂದು ಘಾಟ್ಕೇಸರ್ ಗ್ರಾಮದ ಕಡೆಗೆ ಹೋಗಲು ಎನ್‌ಎಚ್ -163 ರಸ್ತೆಯನ್ನು ದಾಟುತ್ತಿದ್ದಾಗ ಈ ಘಟನೆ ನಡೆದಿದೆ.
ಈ ವೀಡಿಯೊವನ್ನು @sudhakarudumula ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ತಮ್ಮ ಪೋಸ್ಟ್ ನಲ್ಲಿ, ಮೊಬೈಲ್ ಫೋನ್‍ನಲ್ಲಿ ಮಾತನಾಡುವಾಗ ರಸ್ತೆ ದಾಟುವ ವ್ಯಕ್ತಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಘಟನೆಯ ಪರಿಣಾಮ ಅಪಘಾತಕ್ಕೀಡಾದ ವ್ಯಕ್ತಿ ರಸ್ತೆಯಲ್ಲಿ ಬಿದ್ದು ತಲೆ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಆತನನ್ನು ಚಿಕಿತ್ಸೆಗಾಗಿ ಎರಡು ಮೂರು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಕಾರು ಚಾಲಕ ವೇಗವಾಗಿ ಕಾರು ಚಲಾಯಿಸಿದ್ದ ಕಾರಣ ಆತನ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನೆಯ ವೇಳೆ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಚರಾಮ್ ಐಟಿ ಕಾರಿಡಾರ್ ಪೊಲೀಸರು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದು, ಚಾಲಕ ಹಾಗೂ ಆತನ ಕೆಂಪು ಬಣ್ಣದ ಕಾರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.