K2kannadanews.in
Crime News ರಾಯಚೂರು : ಆಶಾಪುರ ರಸ್ತೆಯಲ್ಲಿ ಇರುವ ಔಷಧ ನಿಯಂತ್ರಣ ಇಲಾಖೆಗೆ ಸಂಬಂಧಿಸಿದ ಸಹಾಯಕ ಔಷಧ ನಿಯಂತ್ರಕರ ಕಚೇರಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡು ಕಚೇರಿ ಸುಟ್ಟುಹೋದ ಘಟನೆಯೊಂದು ಇಂದು ಬೆಳ್ಳಂಬೆಳಗ್ಗೆ ಜರುಗಿದೆ.
ಹೌದು ರಾಯಚೂರಿನ ಸಹಾಯಕ ಔಷಧ ನಿಯಂತ್ರಕರ ಕಚೇರಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿಕೊಂಡ ಬೆಂಕಿ ಕಾಣಿಸಿಕೊಂಡಿದ್ದು, ಕಚೇರಿಯಲ್ಲಿನ ಮಹತ್ವದ ದಾಖಲೆಗಳು ಬೆಂಕಿಗಾಹುತಿಯಾಗಿವೆ. ಜಿಲ್ಲೆಯ ಔಷಧಿ ಅಂಗಡಿಗಳ ಹಾಗೂ ಇಲಾಖೆಗೆ ಸಂಬಂಧಿಸಿದ ದಾಖಲೆಗಳೆಲ್ಲಾ ಭಾಗಶಃ ಸುಟ್ಟು ಭಸ್ಮವಾಗಿವೆ ಎನ್ನಲಾಗುತ್ತಿದೆ. ಕಚೇರಿಯಲ್ಲಿದ್ದ ಕಂಪ್ಯೂಟರ್‌ಗಳು, ಪ್ರಿಂಟರ್, ಪೀಠೋಪಕರಣ ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಅಗ್ನಿಗಾಹುತಿಯಾಗಿವೆ.
ಕಚೇರಿ ಆರಂಭಕ್ಕೂ ಮುನ್ನ ಬೆಳಗಿನ ಜಾವ ಹೊತ್ತಿಕೊಂಡ ಬೆಂಕಿಯನ್ನು ನಂದಿಸಲು ಕಚೇರಿ ಸಿಬ್ಬಂದಿಗಳು ಪ್ರಯತ್ನಪಟ್ಟಿದ್ದಾರೆ. ಆದರೇ ಬೆಂಕಿಯ ಕೆನ್ನಾಲಿಗೆ ಹೆಚ್ಚಾದ ಹಿನ್ನೆಲೆ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಲಾಯಿತು. ಕೊನೆಗೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸಿದರು. ಘಟನೆಯು ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.