K2kannadanews.in
Crime news ಮಸ್ಕಿ : ಕೂಲಿ ಕೆಲಸ ಮುಗಿಸಿಕೊಂಡು ವಾಪಸ್ ಮನೆಗೆ ಹೋಗುತ್ತಿದ್ದ ವೇಳೆ, 15ಕ್ಕೂ ಹೆಚ್ಚು ಜನ ಇದ್ದ ಟ್ರ್ಯಾಕ್ಟರ್ ಒಂದು ಕಾಲುವೆಗೆ ಉರಳಿ ಬಿದ್ದು ಓರ್ವ ಮಹಿಳೆ ಮೃತಪಟ್ಟ ಘಟನೆ ಹಾಲಾಪುರ ಗ್ರಾಮದಲ್ಲಿ ಜರುಗಿದೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಹಾಲಾಪುರ ಗ್ರಾಮದ ಬಳಿ ಘಟನೆ ಜರುಗಿದ್ದು, ಎಂದಿನಂತೆ ಟ್ರ್ಯಾಕ್ಟರ್ ನಲ್ಲಿ 15ಕು ಹೆಚ್ಚು ಜನ ಮಹಿಳೆಯರು ಬೆಳಿಗ್ಗೆ ಕೂಲಿ ಕೆಲಸಕ್ಕೆ ತೆರಳಿದ್ದಾರೆ. ಕೂಲಿ ಕೆಲಸ ಮುಗಿಸಿ ವಾಪಸ್ ಬರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಟ್ರ್ಯಾಕ್ಟರ್ ಉರುಳಿ ಬಿದ್ದಿದೆ. ಟ್ರ್ಯಾಲಿ ಉರುಳಿ ಬಿದ್ದ ರಭಸಕ್ಕೆ, ಅಂಬಮ್ಮ(46) ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ಉಳಿದಂತೆ ಅಪಘಾತದಲ್ಲಿ 6 ಜನ ಮಹಿಳೆಯರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರನ್ನು ಕೂಡಲೆ ಕವಿತಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕವಿತಾಳ ಪೊಲೀಸರು ಭೇಟಿ ನೀಡಿದ್ದು ಸ್ಥಳೀಯರಿಂದ ಮಾಹಿತಿ ಪಡೆದು ಸಣ್ಣಪುಟ್ಟ ಗಾಯಗಳಾದವರನ್ನ ಕವಿತಾಳ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಪಘಾತಕ್ಕೆ ಚಾಲಕ ನಿಯಂತ್ರಣ ಕಳೆದುಕೊಂಡಿದ್ದೆ ಕಾರಣ ಎಂದು ಹೇಳಲಾಗುತ್ತಿದ್ದು ತನಿಖೆ ನಡೆಸಿದ್ದಾರೆ. ಸ್ಥಳಿಯರಿಂದ ಮಾಹಿತಿ ಪಡೆದ ಪೊಲೀಸರು ಶವ ಪರೀಕ್ಷೆಗಾಗಿ ಮಹಿಳೆಯ ಮೃತ ದೇಹವನ್ನು ಕವಿತಾಳ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ. ಕವಿತಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.